ಸಂತಾನ ಭಾಗ್ಯ ಬಯಸಿದ್ದ ಮಹಿಳೆಯ ಹತ್ಯೆ - ದೇವಾಲಯದ ಅರ್ಚಕ ಅರೆಸ್ಟ್
Monday, November 20, 2023
ಸೇಲಂ: ವಿವಾಹಿತೆಯೊಬ್ಬಳನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಸೇಲಂನ ದೇವಸ್ಥಾನವೊಂದರ ಅರ್ಚಕನನ್ನು ಪೋಲಿಸರು ಶನಿವಾರ ಬಂಧಿಸಿದ್ದಾರೆ.
ಸೆಲ್ವಿ (28) ಎಂಬಾಕೆ ಹತ್ಯೆಯಾಗಿರುವ ಮಹಿಳೆ. ಸಿವತಪುರ ನಿವಾಸಿ ದೇವಾಲಯದ ಅರ್ಚಕ ವಿ.ಕುಮಾರ (42) ಬಂಧಿತ ಆರೋಪಿ.
ಸೆಲ್ವಿಗೆ ವಿವಾಹವಾಗಿ ಒಂಬತ್ತು ವರ್ಷಳಾಗಿದ್ದರೂ ಮಕ್ಕಳಾಗಿರಲಿಲ್ಲ. ಆದ್ದರಿಂದ ಆಕೆ ಸಂತಾನ ಭಾಗ್ಯವನ್ನು ಕೋರಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಬಂಧಿತ ಆರೋಪಿ ವಿ.ಕುಮಾರ (42) ಸಿವತಪುರಂ ತನ್ನದೇ ಜಮೀನಿನಲ್ಲಿ 20 ವರ್ಷಗಳ ಹಿಂದೆ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿದ್ದ. ಅಲ್ಲಿ ಅರ್ಚಕನಾಗಿ ಸ್ವತಃ ಕಾರ್ಯ ನಿರ್ವಹಿಸುತ್ತಿದ್ದ.
ಅ.15ರಂದು ಸ್ನೇಹಿತೆಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ತಿಳಿಸಿ ಮನೆಯಿಂದ ಬಂದಿದ್ದ ಸೆಲ್ವಿ ಬಳಿಕ ನಾಪತ್ತೆಯಾಗಿದ್ದಳು. ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸೆಲ್ವಿಯ ಪತಿ ಪಸುವರಾಜ್ ಗುರುವಾರ ಥರಮಂಗಲಂ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿ.ಕುಮಾರನ ದೇವಸ್ಥಾನದ ಬಳಿಯ ಪೊದೆಯೊಂದರಲ್ಲಿ ಸೆಲ್ವಿ ಶವವನ್ನು ಪತ್ತೆ ಹಚ್ಚಿದ್ದಾರೆ.
ಒಂದು ವಾರಕ್ಕೂ ಅಧಿಕ ಸಮಯದಿಂದ ಸೆಲ್ವಿ ಈ ದೇವಸ್ಥಾನಕ್ಕೆ ಹೋಗುತ್ತಿದ್ದಳು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಕೆಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ ಕುಮಾರ ದೈಹಿಕ ಸಂಪರ್ಕವನ್ನು ಬಯಸಿದ್ದ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದರಿಂದ ಹತ್ಯೆ ಮಾಡಿದ್ದಾನೆ ಎಂದು ಪೋಲಿಸರು ಶಂಕಿಸಿದ್ದಾರೆ.