ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಜೀವ ದಹನ: ಐವರು ಬೆಸ್ಕಾಂ ಅಧಿಕಾರಿಗಳು ಅರೆಸ್ಟ್
Monday, November 20, 2023
ಬೆಂಗಳೂರು: ನಗರದ ವೈಟ್ ಫೀಲ್ಡ್ ಬಳಿಯ ಕಾಡುಗೋಡಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯದಿಂದ ತಾಯಿ ಹಾಗೂ ಮಗು ಸಜೀವವಾಗಿ ದಹನಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಬೆಸ್ಕಾಂ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಸೌಂದರ್ಯಾ(23) ಮತ್ತು 9 ತಿಂಗಳ ಮಗು ಲಿಯಾ ಮೃತಪಟ್ಟ ದುರ್ದೈವಿಗಳು.
ಭಾನುವಾರ ಮುಂಜಾನೆ ಸುಮಾರು 5 ಗಂಟೆಗೆ ವೇಳೆಗೆ ಪತಿ ಸಂತೋಷ್ ಹಾಗೂ ಮಗುವಿನೊಂದಿಗೆ ಸೌಂದರ್ಯಾ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದರು. ಬಸ್ಸಿನಿಂದ ಇಳಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಮಗುವನ್ನು ಎತ್ತಿಕೊಂಡಿದ್ದ ಪತ್ನಿ ಸೌಂದರ್ಯ ಕಾಲಿರಿಸಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಅವರು ಸ್ಥಳದಲ್ಲೇ ಬೆಂಕಿ ಹತ್ತಿಕೊಂಡು ದಹನವಾಗಿದ್ದಾರೆ. ಈ ವೇಳೆ ಸಂತೋಷ್ ಏನಾಗುತ್ತಿದೆ ಎಂದು ತಿಳಿಯದೆ ಪತ್ನಿ ಹಾಗೂ ಮಗಿವಿನ ರಕ್ಷಣೆಗೆ ಧಾವಿಸಿದ್ದು, ಅವರ ಕೈಗೆ ಸುಟ್ಟ ಗಾಯವಾಗಿದೆ. ಮಗುವನ್ನು ಸೆಳೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಪತಿಯ ಕಣ್ಮುಂದೆಯೇ ಪತ್ನಿ ಹಾಗೂ ಮಗು ಜೀವಂತವಾಗಿ ಸುಟ್ಟು ಹೋಗಿದ್ದಾರೆ.
ಕಾಡುಗೋಡಿಯ ಎ.ಕೆ.ಗೋಪಾಲ್ ಕಾಲನಿ ನಿವಾಸಿಯಾಗಿರುವ ಸಂತೋಷ್ ಕುಟುಂಬ ಸಮೇತರಾಗಿ ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಪತ್ನಿಗೆ ಐಟಿಐ ಪರೀಕ್ಷೆ ಇದ್ದುದರಿಂದ ತುರ್ತಾಗಿ ವಾಪಸ್ ಆಗಿದ್ದರು. ಆದರೆ ಮನೆ ತಲುಪುವ ಮೊದಲೇ ಪತ್ನಿ ಹಾಗೂ ಮಗು ವಿದ್ಯುತ್ ಶಾಕ್ ಗೆ ಬಲಿಯಾಗಿದ್ದರು. ಈ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣ ಸಂಬಂಧ ಬೆಸ್ಕಾಂ ಇಲಾಖೆಯ ಐವರು ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.