ಮೋದಿ ಮಾತು ಕೇಳಿ ಕೆಟ್ಟೆ- BJP ಮುಖಂಡ ಸೋಮಣ್ಣ
Sunday, November 26, 2023
ರಾಜ್ಯ ಬಿಜೆಪಿ ನಾಯಕರ ವಿರುದ್ದ ಮುನಿಸಿ ಕೊಂಡಿರುವ ಮಾಜಿ ಸಚಿವ ವಿ. ಸೋಮಣ್ಣ ಅವರು ಈಗ ತಮ್ಮ ಆಕ್ರೋಶವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಗಳನ್ನು ಶನಿವಾರ ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಬಂದು ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ತಾಸು ಮನೆಯಲ್ಲಿ ಕುಳಿತುಕೊಂಡಿದ್ದರು. ಏನೂ ಮಾಡಲಾಗಲಿಲ್ಲ. ಪ್ರಧಾನಿ ಮೋದಿಯವರು ದಿಲ್ಲಿಗೆ ಕರೆಸಿ ಕೊಂಡು ನಾಲ್ಕು ದಿನ ಇರಿಸಿಕೊಂಡು ಚುನಾವಣೆಗೆ ನಿಂತುಕೋ ಎಂದಿದ್ದು ಅನಿವಾರ್ಯವಾಗಿ ಒಪ್ಪಿ ಕೊಳ್ಳಬೇಕಾಯಿತು ಎಂದು ಬೇಸರದಿಂದ ಹೇಳಿದ್ದಾರೆ.
ಎರಡು ಕಡೆ ಸ್ಪರ್ಧೆ ಮಾಡಿದ್ದಕ್ಕೆ ನನಗೆ ಬೇಸರವಾಗಿದೆ. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಮಹಾ ಅಪರಾಧವಾಗಿದೆ ಎಂದು ಸ್ವಾಮೀಜಿಯಲ್ಲಿ ಹೇಳಿದರು.
ದಿಲ್ಲಿಗೆ ದೂರು
ಈ ನಡುವೆ ಸೋಮಣ್ಣ ಡಿ. 6ರ ಬಳಿಕ ಹೊಸದಿಲ್ಲಿಗೆ ತೆರಳಲು ತೀರ್ಮಾನಿಸಿದ್ದಾರೆ. ಡಿ. 7, 8 ಮತ್ತು 9ರಂದು ಪಕ್ಷದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಅವರೊಂದಿಗೆ ತೆರಳುವುದಾಗಿ ಹೇಳಿದರು.