ಮಂಗಳೂರು: ಹೈವೆಯಲ್ಲಿ ಸ್ಟೂಲ್ ನಲ್ಲಿ ಕುಳಿತು ಬಸ್ ಗೆ ತಡೆಯೊಡ್ಡಿದ ಉದ್ಯಮಿ - ಸಿನಿಮೀಯ ಮಾದರಿಯಲ್ಲಿ ಪ್ರಯಾಣಿಕರಿಗೆ ನೆರವು
Friday, November 10, 2023
ಮಂಗಳೂರು: ತಮಗಾಗುವ ತೊಂದರೆಗಳನ್ನು ಸರಿಪಡಿಸಲು, ಸುಧಾರಣೆಗಳನ್ನು ತರಲು ಪ್ರತಿಭಟನೆ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ತೊಂದರೆ ಸರಿಪಡಿಸಲು ವಿಶೇಷ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಇದೊಂದು ಸಿನಿಮೀಯ ಶೈಲಿಯ ಸನ್ನಿವೇಶ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಅಷ್ಟಕ್ಕೂ ಸರ್ಕಾರಿ ಬಸ್ ಸ್ಥಳೀಯ ಪ್ರಯಾಣಿಕರನ್ನು ನಿರ್ಲಕ್ಷಿಸಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ.
ಮಂಗಳೂರಿನಿಂದ ಕೇರಳಕ್ಕೆ ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಸರ್ವಿಸ್ ರಸ್ತೆಗೆ ಬಾರದೆ ಆಗಾಗ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತಿತ್ತು. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯ ಉದ್ಯಮಿ ಹುಸೈನಾರ್ ಎನ್ನುವವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ಬಸ್ ಅನ್ನು ಸರ್ವೀಸ್ ರಸ್ತೆಗೆ ಇಳಿಯುವಂತೆ ಮಾಡಿದ್ದಾರೆ.
ಹಸೈನಾರ್ ಅವರು ಬಸ್ ಬರುವ ಸಮಯಕ್ಕೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಸ್ಟೂಲ್ ಇಟ್ಟು ಅದರ ಮೇಲೆ ಕುಳಿತಿದ್ದಾರೆ. ಬಳಿಕ ಹೈವೇಯಲ್ಲಿ ಹೋಗುವ ಬಸ್ಗೆ ತಡೆವೊಡ್ಡಿದ್ದಾರೆ. ಈ ಮೂಲಕ ಬಸ್ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ದೂರ ರಿವರ್ಸ್ ಹೋಗುವಂತೆ ಮಾಡಿ ಸರ್ವಿಸ್ ರೋಡ್ನಲ್ಲಿ ತೆರಳುವಂತೆ ಮಾಡಿದ್ದಾರೆ. ಹೀಗೆ ಮಾಡಿದ ಅವರು ಸ್ಥಳೀಯ ಪ್ರಯಾಣಿಕರಿಗೆ ನೆರವಾಗಿದ್ದು, ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.