ಚಿರತೆಯನ್ನೇ ಎದುರಿಸಿ ಏಳು ವರ್ಷದ ಪುತ್ರಿಯನ್ನು ರಕ್ಷಿಸಿದ ತಂದೆ
Wednesday, November 8, 2023
ತುಮಕೂರು: ಚಿರತೆಗಳು ಆಗಾಗ ನಾಡಿನತ್ತ ಬರುತ್ತಿರುವ ಪ್ರಕರಣಗಳನ್ನು ಅಲ್ಲಲ್ಲಿ ಕೇಳುತ್ತಿರುತ್ತೇವೆ. ಆದ್ದರಿಂದ ಬೆಂಗಳೂರಿನ ಕೆಲ ಭಾಗ ಸೇರಿದಂತೆ ರಾಜ್ಯದ ಹಲವೆಡೆ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಪಾರ್ಕಿಂಗ್ ಸ್ಥಳಕ್ಕೂ ಚಿರತೆ ಬಂದು ಹೋದ ಪ್ರಕರಣ ನಡೆದಿದೆ. ಇದೀಗ ಬಾಲಕಿಯೊಬ್ಬಳು ಚಿರತೆಯಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಪ್ರಸಂಗ ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಲೇಖನಾ ಎಂಬ ಏಳು ವರ್ಷದ ಬಾಲಕಿ ಚಿರತೆಗೆ ಬಲಿಯಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ವಿಶೇಷವೆಂದರೆ ಬಾಲಕಿಯ ತಂದೆಯೇ ಆಕೆಯನ್ನು ರಕ್ಷಿಸಿದ್ದಾರೆ. ತಂದೆ ರಾಕೇಶ್ ಚಿರತೆಯನ್ನೇ ಎದುರಿಸಿ ಪುತ್ರಿಯನ್ನು ರಕ್ಷಣೆ ಮಾಡಿಕೊಂಡಿದ್ದಾರೆ.
ಮಂಗಳವಾರ ಸಂಜೆ ಮನೆಯ ಅಂಗಳದಲ್ಲಿ ಲೇಖನ ಆಟ ಆಡುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತಂದೆ ರಾಕೇಶ್ ಚಿರತೆಯನ್ನು ಎದುರಿಸಿ ಜೋರಾಗಿ ಕೂಗಿ, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಬಾಲಕಿಯನ್ನು ಬಿಟ್ಟು ಹೋಗಿದೆ. ಆಕೆಯ ಕಾಲಿಗೆ ಪರಚಿದ ಗಾಯಗಳಾಗಿವೆ. ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.