ಮಂಗಳೂರು: ಫಲ್ಗುಣಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು
Thursday, November 23, 2023
ಮಂಗಳೂರು: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಯುವಕನ ಮೃತದೇಹವು ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ಕಾವೂರು ಆಕಾಶಭವನ ನಿವಾಸಿ ಪ್ರಶಾಂತ್ ಕುಮಾರ್ ಮೃತಪಟ್ಟ ಯುವಕ
ಮಂಗಳವಾರ ಬೆಳಗ್ಗೆ ತಮ್ಮ ಸ್ನೇಹಿತರೊಂದಿಗೆ ಪೊಳಲಿ ದೇವಸ್ಥಾನಕ್ಕೆ ಪ್ರಶಾಂತ್ ಕುಮಾರ್ ತೆರಳಿದ್ದರು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಫಲ್ಗುಣಿ ನದಿಗೆ ಇಳಿದು ಸ್ನಾನ ಮಾಡಿದ್ದರು. ಬಳಿಕ ಅವರ ಶೂ ದಾರ ನೀರಿನಲ್ಲಿ ಹೋಗಿದೆ ಎಂದು ಅದನ್ನು ಹುಡುಕಲು ನೀರಿಗೆ ಇಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎಂದು ಅವರ ಸ್ನೇಹಿತರು ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದ ಕುರಿತು ಮಾಹಿತಿ ತಿಳಿದೊಡನೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಶಾಂತ್ ಅವರಿಗಾಗಿ ಶೋಧಕಾರ್ಯ ಆರಂಭಿಸಿದ್ದರು. ಬುಧವಾರ ಸಂಜೆ 3 ಗಂಟೆಯ ಸುಮಾರಿಗೆ ಪ್ರಶಾಂತ್ ಆಚಾರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.