ರಸ್ತೆಗಡ್ಡ ಬಂದಿರುವ ಹಸುವನ್ನು ತಪ್ಪಿಸಲು ಹೋದ ಆಟೊ ಪಲ್ಟಿ - ಚಾಲಕ ಮೃತ್ಯು
Thursday, November 30, 2023
ಭಟ್ಕಳ: ರಸ್ತೆಗಡ್ಡ ಬಂದಿರುವ ಹಸುವನ್ನು ತಪ್ಪಿಸಲು ಹೋಗಿ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ ಮೃತಪಟ್ಟಿರುವ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ.
ನಾಗೇಶ ಕೃಷ್ಣ ಗೊಂಡ ಮೃತಪಟ್ಟ ಆಟೋ ಚಾಲಕ. ಇವರು ಭಟ್ಕಳದಿಂದ ಮಾರುಕೇರಿ ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದರು. ಕೋಟಖಂಡ ಸಮೀಪ ಬಂದಾಗ ರಸ್ತೆಗೆ ಅಡ್ಡ ಬಂದಿರುವ ದನವನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿದೆ.
ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ ಗೊರಟೆ ಕ್ರಾಸ್ ಸಮೀಪ ಸಾವನ್ನಪ್ಪಿದ್ದಾರೆ. ಆಟೋ ಹಿಂಬದಿಯಲ್ಲಿದ್ದ ನಾಗರಾಜ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಗಾಯಾಳು ನಾಗರಾಜ್ ನಾಯ್ಕ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡ ಸಿ.ಪಿ.ಐ ಚಂದನಗೋಪಾಲ ತನಿಖೆ ಕೈಗೊಂಡಿದ್ದಾರೆ.