ಮಂಗಳೂರು: ಅಪಾರ್ಟ್ಮೆಂಟ್ ಬೆಂಕಿ ಅವಘಡಕ್ಕೆ ಮಹಿಳೆ ಬಲಿ, ಓರ್ವನಿಗೆ ಗಾಯ
Tuesday, November 28, 2023
ಮಂಗಳೂರು: ನಗರದ ಅತ್ತಾವರದ ಅಪಾರ್ಟ್ಮೆಂಟ್ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಸಹೈನ್ ಮೂಸಬ್ ( 57) ಸಜೀವ ದಹನಗೊಂಡ ಮಹಿಳೆ.
ನಗರದ ಅತ್ತಾವರದ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಸಹೈನ್ ಮೂಸಬ್ ಬಾತ್ ರೂಂಗೆ ತೆರಳಿದ್ದರು. ಬೆಂಕಿಯ ಹೊಗೆಗೆ ಬಾತ್ ರೂಂನೊಳಗೆ ಸಹೈನ್ ಮೂಸಬ್ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ತಗುಲುವ ಸಂದರ್ಭ ಮನೆಯಲ್ಲಿ ಒಂಭತ್ತು ಮಂದಿಯಿದ್ದರು. ಅದರಲ್ಲಿ ಏಳು ಮಂದಿ ಹೊರಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಒಳಗೆ ಇರುವುದು ತಿಳಿದಿದೆ. ಆದರೆ ಅವರನ್ನು ರಕ್ಷಿಸುವ ವೇಳೆ ಸಹೈನ್ ಮೂಸಬ್ ಸಾವನ್ನಪ್ಪಿದ್ದಾರೆ. ಅಗ್ನಿ ಅವಘಡ ನಡೆದ ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.