ವಿಮೆ ಹಣಕ್ಕಾಗಿ ಭಿಕ್ಷುಕನನ್ನು ಕೊಲೆಗೈದು ತನ್ನದೇ ಸಾವು ಎಂದು ಬಿಂಬಿಸಿದ ಕತರ್ನಾಕ್ ಖದೀಮ ಪೊಲೀಸ್ ಬಲೆಗೆ
Thursday, November 9, 2023
ಅಹಮದಾಬಾದ್: ಹಣಕ್ಕಾಗಿ ಮನುಷ್ಯ ಎಂಥಹ ನೀಚ ಕೆಲಸಕ್ಕಾದರೂ ಇಳಿಯುತ್ತಾನೆ. ಈ ಮಾತಿಗೆ ಉದಾಹರಣೆ ಎಂಬಂಥ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದು 17 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ವಿಮೆಯ ಹಣಕ್ಕೆ ನಿರ್ಗತಿಕ ಭಿಕ್ಷುಕನನ್ನು ಕೊಲೆಗೈದು ತನ್ನ ಗುರುತು ಮರೆಸಿ ಖತರ್ನಾಕ್ ಅಸಾಮಿಯ ಪಾಪದ ಕೊಡ ತುಂಬಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಅನಿಲ್ಸಿಂಗ್ ವಿಜಯ್ಪಾಲ್ಸಿಂಗ್ ಚೌಧರಿ ಎಂಬಾತನನ್ನು ಅಹಮದಾಬಾದ್ ನಗರದ ನಿಕೋಲ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಅಹಮದಾಬಾದ್ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಭಟ್ಟ-ಪರ್ಸೌಲ್ ಗ್ರಾಮದ ನಿವಾಸಿ.
2006ರ ಜುಲೈ 31ರಂದು ಆಗ್ರಾದ ರಾಕಬ್ಗಂಜ್ ಪೊಲೀಸ್ ಠಾಣೆಯಲ್ಲಿ ಕಾರು ಅಪಘಾತ ಪ್ರಕರಣವೊಂದು ದಾಖಲಾಗಿತ್ತು. ಅಪಘಾತದಲ್ಲಿ ಕಾರು ಹೊತ್ತು ಉರಿದು ಚಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದ. ಆ ಸಮಯದಲ್ಲಿ ಮೃತ ಚಾಲಕನನ್ನು ಅವರ ತಂದೆಯ ಹೇಳಿಕೆಯಂತೆ ಅನಿಲ್ಸಿಂಗ್ ವಿಜಯ್ಪಾಲ್ಸಿಂಗ್ ಚೌಧರಿ ಎಂದು ಗುರುತಿಸಲಾಗಿತ್ತು. ಆದರೆ, ಇತ್ತೀಚೆಗೆ ಅಹಮದಾಬಾದ್ ನಗರ ಕ್ರೈಂ ಬ್ರಾಂಚ್ ಪೊಲೀಸರಿಗೆ ಅನಿಲ್ ಸಿಂಗ್ ಇನ್ನೂ ಜೀವಂತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಆತನನ್ನು ಬಂಧಿಸಿದ ಬಳಿಕ ಕಾರು ಅಪಘಾತ ಪ್ರಕರಣದ ಒಂದೊಂದೇ ಅಸಲಿಯತ್ತು ಬಯಲಾಗಿದೆ. ಸಾವಿನ ಬಳಿಕ ಇನ್ಶೂರೆನ್ಸ್ ಹಣವನ್ನು ಪಡೆಯುವುದಕ್ಕಾಗಿ ತಾನು ಮತ್ತು ತನ್ನ ತಂದೆ ಸೇರಿಕೊಂಡು ಮಾಡಿದ ಸಂಚು ಎಂಬುದನ್ನು ಬಾಯ್ಬಿಟ್ಟಿದ್ದಾನೆ. ತಮ್ಮ ಸಂಚಿನ ಪ್ರಕಾರ ಆರೋಪಿ ಅನಿಲ್, 2004ರಲ್ಲಿ ಇನ್ಶೂರೆನ್ಸ್ ಪಾಲಿಸಿ ಮಾಡಿದ್ದ. ಇದಾದ ಬಳಿಕ ಒಂದು ಕಾರನ್ನು ಖರೀದಿ ಮಾಡಿದ್ದ. ತಮ್ಮ ಸಂಚಿನಂತೆ ಅನಿಲ್ ಸಿಂಗ್, ಆತನ ತಂದೆ ಮತ್ತು ಸಹೋದರರು ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನಿಗೆ ಆಹಾರದ ಆಮಿಷ ಒಡ್ಡಿ, ಆತನನ್ನು ಆಗ್ರಾದ ಹೋಟೆಲ್ ಒಂದಕ್ಕೆ ಕರೆದೊಯ್ದು, ನಿದ್ದೆ ಬರುವಂತಹ ಔಷಧಿಯನ್ನು ಬೆರೆಸಿದ ಆಹಾರವನ್ನು ಕೊಟ್ಟಿದ್ದರು.
ಆರೋಪಿಗಳು ನೀಡಿದ ಆಹಾರವನ್ನು ತಿಂದ ಭಿಕ್ಷುಕ ಗಾಢ ನಿದ್ರೆಗೆ ಜಾರಿದ್ದ. ಆತನನ್ನು ಕಾರಿನಲ್ಲಿಟ್ಟು, ಅಪಘಾತ ಎಂಬಂತೆ ಬಿಂಬಿಸಲು ಒಂದು ವಿದ್ಯುತ್ ಕಂಬಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ್ದರು. ಕಾರಿನ ಸೀಟಿನಲ್ಲಿ ಭಿಕ್ಷುಕನನ್ನು ಕೂರಿಸಿ ಬೆಂಕಿ ಹಚ್ಚಿದ್ದರು. ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಆರೋಪಿಗಳು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಅನಿಲ್ ಅವರ ತಂದೆ ವಿಜಯ್ಪಾಲ್ಸಿಂಗ್ ಸುಟ್ಟು ಕರಕಲಾಗಿದ್ದ ಮೃತದೇಹವನ್ನು ಪತ್ತೆಹಚ್ಚಿದ್ದರು. ಅಲ್ಲದೆ, ಮೃತದೇಹವನ್ನು ಎಲ್ಲ ವಿಧಿವಿಧಾನಗಳೊಂದಿಗೆ ಗೌತಮ್ ಬುದ್ಧ ನಗರ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದಾದ ಬಳಿಕ ಯೋಜನೆಯಂತೆ ಅನಿಲ್ ಅವರ ತಂದೆ ವಿಜಯ್ಪಾಲ್ಸಿಂಗ್, ತಮ್ಮ ಮಗನ ಅಪಘಾತ ಮರಣ ವಿಮೆ ಮೊತ್ತ 80 ಲಕ್ಷ ರೂ.ವನ್ನು ಕ್ಲೈಮ್ ಮಾಡಿ, ಬಂದ ಹಣದಲ್ಲಿ ಕುಟುಂಬ ಸದಸ್ಯರಿಗೆ ವಿತರಿಸಿದ್ದರು.
ತನ್ನ ಪಾಲಿನ ಹಣವನ್ನು ಪಡೆದುಕೊಂಡ ಅನಿಲ್ಸಿಂಗ್ ಚೌಧರಿ 2006ರಲ್ಲಿ ಅಹಮದಾಬಾದ್ಗೆ ಬಂದು ನೆಲೆಸಿದ್ದ. ಅಂದಿನಿಂದ ಒಮ್ಮೆಯೂ ತನ್ನ ಗ್ರಾಮಕ್ಕೆ ಅನಿಲ್ ಹಿಂತಿರುಗಿರಲಿಲ್ಲ. ಅನಿಲ್ಸಿಂಗ್ ಅಂತ ಇದ್ದ ಹೆಸರನ್ನು ರಾಜ್ಕುಮಾರ್ ಚೌಧರಿ ಎಂದು ಬದಲಾಯಿಸಿಕೊಂಡಿದ್ದಾನೆ. ಅಲ್ಲದೆ, ಇದೇ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್ ಸಹ ಹೊಂದಿದ್ದಾನೆ. ಆಟೋ ರಿಕ್ಷಾ ಒಂದನ್ನು ಖರೀದಿ ಮಾಡಿದ್ದ. ಬಳಿಕ ಸಾಲದ ಮೇಲೆ ಕಾರು ಖರೀದಿ ಮಾಡಿ ಜೀವನ ಸಾಗಿಸುತ್ತಿದ್ದ.
ಪೊಲೀಸರ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಹಮದಾಬಾದ್ಗೆ ಬಂದ 17 ವರ್ಷಗಳಿಂದ ತಮ್ಮ ಊರಿಗೆ ಮರಳುವುದಾಗಲಿ ಅಥವಾ ಆತನ ಕುಟಂಬದ ಸದಸ್ಯರಿಗೆ ಕರೆ ಮಾಡುವುದಾಗಲಿ ಮಾಡಿರಲಿಲ್ಲ. ಆದರೆ, ಪಾಪದ ಕೊಡ ತುಂಬಿತು ಎಂಬಂತೆ ಅನಿಲ್ ಸಿಂಗ್ ನಿಜ ಬಣ್ಣ ಬಯಲಾಗಿದ್ದು, ಯಾರೋ ನೀಡಿದ ಸರಿಯಾದ ಸುಳಿವಿನ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿ ಅನಿಲ್ನನ್ನು ಉತ್ತರ ಪ್ರದೇಶ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.