ಐಶ್ವರ್ಯಾ ರೈ ಹೆಸರು ಉಲ್ಲೇಖಿಸಿ ವಿವಾದಕ್ಕೀಡಾದ ಪಾಕ್ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಹೇಳಿಕೆ
Wednesday, November 15, 2023
ಮುಂಬೈ: ವಿಶ್ವಕಪ್ ಕ್ರಿಕೆಟ್ ನಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನ ನೀಡಿರುವ ಕುರಿತು ಮಾತನಾಡುವ ವೇಳೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಝಾಕ್ ನೀಡಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಉಲ್ಲೇಖ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಉಮರ್ ಗುಲ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಮಾಜಿ ಆಟಗಾರರು ಉಪಸ್ಥಿತರಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಾಕ್, 'ನಾನು ಪಾಕ್ ಕ್ರಿಕೆಟ್ ಮಂಡಳಿಯ ಉದ್ದೇಶವನ್ನು ಇಲ್ಲಿ ಉಲ್ಲೇಖಿಸುತ್ತೇನೆ. ನಾನು ಆಡುವಾಗ, ನಮ್ಮ ನಾಯಕ ಯೂನಿಸ್ ಖಾನ್ ರವರ ಒಳ್ಳೆಯ ಉದ್ದೇಶಗಳ ಬಗ್ಗೆ ನನಗೆ ಅರಿವಿತ್ತು. ಅದು ನನಗೆ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡಿತು. ದೇವರ ಸಹಾಯದಿಂದ ಪಾಕ್ ಗಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಈಗ ಆಟಗಾರರ ಗುಣಮಟ್ಟ ಸುಧಾರಿಸುವ ಉದ್ದೇಶವೇ ಇಲ್ಲ. ಉದಾಹರಣೆಗೆ, ಒಳ್ಳೆಯ ಸ್ವಭಾವದ ಮಗು ಪಡೆಯಲು ನಾನು ಐಶ್ವರ್ಯಾ ರೈ ಅವರನ್ನು ಮದುವೆಯಾಗುತ್ತೇನೆ ಎಂದು ನೀವು ನಂಬಿದರೆ ಅದು ಎಂದಿಗೂ ಸಂಭವಿಸುವುದಿಲ್ಲ. ಮೊದಲು ಉದ್ದೇಶ ಸರಿಪಡಿಸಿಕೊಳ್ಳಬೇಕು, ಒಳ್ಳೆಯ ತಂಡ ಕಟ್ಟಬೇಕು' ಎಂದಿದ್ದರು.
ರಜಾಕ್ ರವರ ಪ್ರಕಾರ, ಪಿಸಿಬಿ ಹಿಂದಿನಂತೆ ಆಟಗಾರರ ಬಗ್ಗೆ ಕಾಳಜಿ ವಹಿಸುವುದಿಲ್ಲ. ರಝಾಕ್ ಹೇಳಿರುವ ವಿವಾದಾತ್ಮಕ ಹೇಳಿಕೆಗಳ ಬಳಿಕ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ನಗುತ್ತಾ ಚಪ್ಪಾಳೆ ತಟ್ಟಿದ್ದರು. ಆದರೆ ವಿವಾದಾತ್ಮಕ ಹೇಳಿಕೆಗಳ ಬಳಿಕ, ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್ ಅವರನ್ನು ದೂಷಿಸಲು ಪ್ರಾರಂಭಿಸಿದರು.
ಟ್ವಿಟ್ಟರ್ ಬಳಕೆದಾರರೊಬ್ಬರು X ನಲ್ಲಿ 'ಅಬ್ದುಲ್ ರಝಾಕ್ ಐಶ್ವರ್ಯಾ ರೈ ಬಗ್ಗೆ ಹೇಳಿದ್ದು ತುಂಬಾ ಕೆಳದರ್ಜೆಯ ಹೇಳಿಕೆ. ಶಾಹಿದ್ ಅಫ್ರಿದಿಯಂತಹ ವ್ಯಕ್ತಿ ಅಲ್ಲಿ ಕುಳಿತು ಅದನ್ನು ಅನುಮೋದಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಬ್ಬರು, "ಅಬ್ದುಲ್ ರಝಾಕ್, ನೀವು ತುಂಬಾ ಕೆಳಮಟ್ಟಕ್ಕಿಳಿದಿದ್ದೀರಿ. ನಿಮ್ಮ ಮಟ್ಟಕ್ಕೆ ಅನುಗುಣವಾಗಿ ಮಾತನಾಡಿ. ನೀವು ಐಶ್ವರ್ಯಾ ರೈ ಬಗ್ಗೆ ಏನನ್ನೂ ಹೇಳಬೇಕಾಗಿಲ್ಲ. ದಯವಿಟ್ಟು ಭಾರತೀಯ ನಟಿಯ ಬಗ್ಗೆ ಮಾತನಾಡುವ ಬದಲು ನಿಮ್ಮದೇಶದ ಆಟಗಾರರು ಮತ್ತು ಕ್ರಿಕೆಟ್ ವ್ಯವಸ್ಥೆಯ ಬಗ್ಗೆ ಮಾತನಾಡಿ'' ಎಂದು ತಿರುಗೇಟು ನೀಡಿದ್ದಾರೆ.
ಇದನ್ನು ನಾಚಿಕೆಗೇಡಿನ ಹೇಳಿಕೆ ಎಂದು ಕರೆದ ಒಬ್ಬ ಬಳಕೆದಾರರು, ಗುಲ್ ಮತ್ತು ಅಫ್ರಿದಿಯನ್ನು ದೂಷಿಸಿದ್ದಾರೆ. ತಮ್ಮಪೋಸ್ಟ್ನಲ್ಲಿ “ಉಮರ್ ಗುಲ್ ಮತ್ತು ಶಾಹಿದ್ ಅಫ್ರಿದಿ ನಗುತ್ತಿದ್ದಾರೆ ಮತ್ತು ಚಪ್ಪಾಳೆ ತಟ್ಟುತ್ತಿದ್ದಾರೆ. ಶಾಹಿದ್ ಅಫ್ರಿದಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ", ಎಂದು ಹೇಳಿದ್ದಾರೆ.