ಬಂಟ್ವಾಳ: ನಾಪತ್ತೆಯಾದ ನೆರೆಹೊರೆ ಮನೆಯ ಯುವಕ - ಯುವತಿ ಕಾಞಂಗಾಡಿನಲ್ಲಿ ಪತ್ತೆ, ಇಬ್ಬರೂ ಪೊಲೀಸ್ ವಶಕ್ಕೆ
Thursday, November 30, 2023
ಬಂಟ್ವಾಳ: ನಾಲ್ಕು ದಿನಗಳ ಹಿಂದೆ ಸಜಿಪ ಮುನ್ನೂರಿನ ನೆರೆಹೊರೆ ಮನೆಯ ಯುವಕ ಹಾಗೂ ಯುವತಿಯ ನಾಪತ್ತೆಯಾಗಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಅವರಿಬ್ಬರನ್ನೂ ಕೇರಳದ ಕಾಞಂಗಾಡಿನಲ್ಲಿ ಪತ್ತೆ ಮಾಡಿದ್ದು, ಮರಳಿ ಊರಿಗೆ ಕರೆತಂದಿದ್ದಾರೆ.
ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದ ಆಯಿಷತ್ ರಸ್ಮಾ(18) ಮತ್ತು ನೆರೆಮನೆ ನಿವಾಸಿ ಮೊಹಮ್ಮದ್ ಸಿನಾನ್ (23) ನ.24ರಂದು ರಾತ್ರಿ ಮಲಗಿದ್ದವರು ಮರುದಿನ ಬೆಳಗ್ಗೆ ನಾಪತ್ತೆಯಾಗಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗುವ ಉದ್ದೇಶದಿಂದ ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಎರಡೂ ಮನೆಯವರು ನಾಪತ್ತೆ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಮೊಬೈಲ್ ಟವರ್ ಆಧಾರದಲ್ಲಿ ತನಿಖೆ ನಡೆಸಿದ್ದು ಕಾಸರಗೋಡು ಭಾಗದಲ್ಲಿ ಇರುವ ಮಾಹಿತಿ ಪಡೆದು ಬೆನ್ನುಹತ್ತಿದ್ದಾರೆ. ಅವರನ್ನು ಬಂಟ್ವಾಳ ಠಾಣೆಗೆ ಕರೆತಂದಿದ್ದು, ತಾವು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ. ಪೊಲೀಸರು ಯುವಕ- ಯುವತಿಯನ್ನು ಅವರ ಮನೆಯವರ ವಶಕ್ಕೆ ಒಪ್ಪಿಸಿದ್ದಾರೆ.