-->
ಬೋನಸ್ ನೀಡಿಲ್ಲವೆಂದು ಡಾಬಾ ಮಾಲಕನನ್ನೇ ಹತ್ಯೆಗೈದ ಕೆಲಸಗಾರರು

ಬೋನಸ್ ನೀಡಿಲ್ಲವೆಂದು ಡಾಬಾ ಮಾಲಕನನ್ನೇ ಹತ್ಯೆಗೈದ ಕೆಲಸಗಾರರು

ಹೊಸದಿಲ್ಲಿ: ದೀಪಾವಳಿ ಬೋನಸ್ ನೀಡದಿದ್ದ ಡಾಬಾ ಮಾಲಕನನ್ನು ಇಬ್ಬರು ಕೆಲಸಗಾರರು ಥಳಿಸಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ಶನಿವಾರ ನಡೆದಿದೆ.  

ರಾಜು ಧೆಂಗ್ರೆ ಹತ್ಯೆಯಾದ ಡಾಬಾ ಮಾಲಕ. ಈತ ಸುರ್ಗಾಂವ್‌ ಗ್ರಾಮದ ಸರಪಂಚನಾಗಿದ್ದು, ಇತ್ತೀಚೆಗೆ ನಡೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದನು.

ನಾಗಪುರದ ಕುಹಿ ಪಾಟಾ ಸಮೀಪ ರಾಜು ಧೇಂಗ್ರೆ ಡಾಬಾ ನಡೆಸುತ್ತಿದ್ದ. ಆತನಲ್ಲಿ ದೀಪಾವಳಿ ಬೋನಸ್‌ ನೀಡುವಂತೆ  ಇಬ್ಬರು ಕೆಲಸಗಾರರಾದ ಛೋಟು ಹಾಗೂ ಆದಿ ಒತ್ತಾಯಿಸಿದ್ದರು. ಆದರೆ ಬೋನಸ್ ನೀಡಲು ಆತ ನಿರಾಕರಿಸಿದ್ದ. ಇದರಿಂದ ಆಕ್ರೋಶಗೊಂಡ ಛೋಟು ಹಾಗೂ ಆದಿ, ಮಾಲಕ ರಾಜುವನ್ನು ಹಿಗ್ಗಾಮಗ್ಗಾ ಥಳಿಸಿ, ಬಳಿಕ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೋನಸ್ ನೀಡದ್ದಕ್ಕೆ ಆರೋಪಿಗಳು ರಾತ್ರಿ ಊಟವಾದ ಬಳಿಕ ಮಂಚದಲ್ಲಿ ಮಲಗಿದ್ದ ರಾಜು ಧೇಂಗ್ರೆಯ ಕತ್ತಿಗೆ ಆದಿ ಹಾಗೂ ಚೋಟು ಹಗ್ಗ ಬಿಗಿದಿದ್ದಾರೆ. ಬಳಿಕ ಭಾರವಾದ ವಸ್ತುವಿನಿಂದ ಆತ ತಲೆಯನ್ನು ಜಜ್ಜಿ, ಹರಿತವಾದ ಆಯುಧದಿಂದ ಆತನ ಮುಖವನ್ನು ಸೀಳಿಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಹಣಕಾಸಿನ ವಿಚಾರದಲ್ಲಿ ನಡೆದ ಕೊಲೆಯಾಗಿರಬಹುದು ಎಂದು ಕಂಡು ಬಂದರೂ ರಾಜಕೀಯ ದ್ವೇಷದ ಹಿನ್ನೆಲೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಹರ್ಷ ಎ. ಪೊದ್ದಾರ್ ತಿಳಿಸಿದ್ದಾರೆ.

ಕೊಲೆಯ ಬಳಿಕ ಧೇಂಗ್ರೆಯ ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟಿದ್ದರು. ಬಳಿಕ ಆರೋಪಿಗಳು ಆತನ ಕಾರಿನಲ್ಲಿ ಪರಾರಿಯಾಗಿದ್ದರು. ಆದರೆ ಕಾರನ್ನು ಆರೋಪಿಗಳು ಸಮೀಪದ ನಾಗಪುರ -ಉಮರೇದ್ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಅವರು ಪಂಚಗಾಂವ್ ನಿಂದ ನಾಗಪುರಕ್ಕೆ ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ‌.

Ads on article

Advertise in articles 1

advertising articles 2

Advertise under the article