ಬೆಳ್ತಂಗಡಿ- ಪೊಲೀಸರನ್ನೆ ನಕ್ಸಲರು ಎಂದು ಪ್ರಚಾರ ಮಾಡಿದ ವಂಚನೆ ಪ್ರಕರಣದ ಆರೋಪಿ
Thursday, November 23, 2023
ಮಂಗಳೂರು: ಪ್ರಕರಣವೊಂದರ ತನಿಖೆಗೆ ಮನೆಗೆ ಆಗಮಿಸಿದ ಮೂಡುಬಿದಿರೆ ಪೊಲೀಸರನ್ನು ನಕ್ಸಲರು ಎಂದು ಪ್ರಚಾರ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತ ಈ ರೀತಿ ಪ್ರಚಾರ ಮಾಡಿದ್ದಾನೆ. ಮೂಡುಬಿದಿರೆ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆಂದು ಮೂಡಬಿದಿರೆ ಪೊಲೀಸರು ಮಂಗಳವಾರ ರಾತ್ರಿ 9.30ರ ವೇಳೆಗೆ ಜೋಸಿ ಆಂಟೋನಿ ಮನೆಗೆ ತೆರಳಿದ್ದರು. ಪೊಲೀಸರೆಂದು ತಿಳಿದಾಕ್ಷಣ ಆರೋಪಿ ಮನೆ ಬಾಗಿಲು ತೆರೆದಿರಲಿಲ್ಲ.
ಅಲ್ಲದೆ ಜೋಸಿ ಆಂಟೋನಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದ. ಅಲ್ಲದೆ ಸ್ಥಳೀಯರಲ್ಲೂ ತಮ್ಮ ಮನೆಗೆ ನಕ್ಸಲರು ಬಂದಿದ್ದಾರೆಂದು ಹೇಳಿದ್ದ . ಇದರಿಂದ ಜಾಗೃತರಾದ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಜೋಸಿ ಮನೆಗೆ ಧಾವಿಸಿದ್ದಾರೆ. ಆದರೆ ವಿಚಾರಣೆ ವೇಳೆ ಮನೆಗೆ ಬಂದಿರುವುದು ಮೂಡುಬಿದಿರೆ ಪೊಲೀಸರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಜೋಸಿ ಆಂಟೋನಿ ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬವರಿಗೆ ಜಮೀನು ಮಾರಾಟ ಮಾಡುವ ವಿಚಾರದಲ್ಲಿ ವಂಚನೆ ಮಾಡಿದ್ದ. ಇದರ ಪ್ರಕರಣ ಮೂಡುಬಿದಿರೆಯಲ್ಲಿ ದಾಖಲಾಗಿ ಪೊಲೀಸರು ಮನೆಗೆ ಬಂದಾಗ ಮನೆಗೆ ನಕ್ಸಲ್ ಬಂದಿದ್ದಾರೆಂದು ಸುದ್ದಿ ಹಬ್ಬಿಸಿದ್ದಾನೆ.