ಪಬ್ಲಿಸಿಟಿ ಗೀಳಿನಿಂದ ಪೊಲೀಸ್ ಅಧಿಕಾರಿಯಾಗಲು ಹೋಗಿ ಪೊಲೀಸ್ ಅತಿಥಿಯಾದ ಯುವಕ
ಸೂರತ್: ಕ್ರೈಂಥ್ರಲ್ಲರ್ ವೆಬ್ ಸರಣಿಗಳಿಂದ ಪ್ರೇರಿತನಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಐಪಿಎಸ್ ಅಧಿಕಾರಿ ಎಂದು ಬಿಂಬಿಸಿ ವಾಹನ ತಪಾಸಣೆ ಮಾಡುತ್ತಿದ್ದ ಯುವಕನನ್ನು ಸೂರತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ ಮೊಹಮ್ಮದ್ ಸರ್ಮಾಜ್ ಆಲಂ (26) ಬಂಧಿತ ಆರೋಪಿ. ಈತ ಸೂರತ್ನ ಪ್ರತಿಷ್ಠಿತ ಬಟ್ಟೆ ಅಂಗಡಿ ಒಂದರಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ಜನರನ್ನು ಮೆಚ್ಚಿಸಲು ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಇದಲ್ಲದೆ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಈತ ಫೋಟೋ ತೆಗೆಸಿಕೊಳ್ಳುತ್ತಿದ್ದ.
ನಗರದ ಉದ್ನಾ ಪ್ರದೇಶದ ರಸ್ತೆಯೊಂದರಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ವ್ಯಕ್ತಿಯೊಬ್ಬ ಗಾಡಿಗಳನ್ನು ಪರಿಶೀಲಿಸುತ್ತಿದ್ದಾನೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಬಂಧಿಸಿ ಆತನ ಬಳಿಯಿದ್ದ ಐಪಿಎಸ್ ಬ್ಯಾಡ್ಜ್, ಡಮ್ಮಿ ವಾಕಿ ಟಾಕಿ, ಪಿಸ್ತೂಲ್ ಹಾಗೂ ಸಮವಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯು ತಾನು ಸಿನಿಮಾ ಹಾಗೂ ಕ್ರೈಂ ಆಧಾರಿತ ವೆಬ್ ಸರಣಿಗಳನ್ನು ನೋಡಿ ಪ್ರಭಾವಿತನಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಆತ ಯಾರ ಬಳಿಯೂ ಹಣ ಪಡೆದಿಲ್ಲ ಎಂಬುದು ಕಂಡು ಬಂದಿದ್ದು, ಆತನ ವಿರುದ್ಧ ಭಾರತ ದಂಡ ಸಂಹಿತೆ (IPC Section) ಸೆಕ್ಷನ್ 170 ಮತ್ತು 171 ರ ಅಡಿಯಲ್ಲಿ FIR ದಾಖಲಿಸಲಾಗಿದೆ ಎಂದು ಸೂರತ್ ಡಿಸಿಪಿ ಭಗೀರಥ ಗಾಧವಿ ತಿಳಿಸಿದ್ದಾರೆ.