ಎಲ್ಲಾ ಸಂಪತ್ತು ಮಗನಿಗೆ ಕೊಟ್ಟು ತಪ್ಪು ಮಾಡಿದೆ- ನೀವು ಈ ರೀತಿ ಮಾಡಬೇಡಿ- RAYMOND ಸಂಸ್ಥಾಪಕನ ಮನದ ಮಾತು
Saturday, November 25, 2023
ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಮತ್ತು - ಪತ್ನಿ ನವಾಜ್ ಮೋದಿ ಡಿವೋರ್ಸ್ ಸುದ್ದಿಯ ನಡುವೆ, ರೇಮಂಡ್ ಗ್ರೂಪ್ ಸಂಸ್ಥಾಪಕ ಮತ್ತು ಗೌತಮ್ ತಂದೆ
ವಿಜಯಪತ್ ಸಿಂಘಾನಿಯಾ ಮನದ ಮಾತುಗಳು ಭಾರೀ ಸಂಚಲನಕ್ಕೆ ಕಾರಣವಾಗಿವೆ.
"ನನ್ನ ಬಳಿ ಈಗ ಏನೂ ಇಲ್ಲ. ಎಲ್ಲಾ ಆಸ್ತಿ ಮಗ ಗೌತಮ್ ಸಿಂಘಾನಿಯಾಗೆ ಕೊಟ್ಟು ತಪ್ಪು ಮಾಡಿದೆ. ಇದು ನನ್ನ ಪಾಲಿನ ಮುಟ್ಟಾಳ ನಿರ್ಧಾರ. ಎಲ್ಲ ಆಸ್ತಿ ಕೊಟ್ಟ ಬಳಿಕವೂ ನನ್ನ ಬಳಿ ಸ್ವಲ್ಪ ಹಣ ಉಳಿದಿತ್ತು. ಹೀಗಾಗಿ ಇಂದು ಬದುಕುತ್ತಿದ್ದೇನೆ. ಇಲ್ಲದಿದ್ದರೆ ಬೀದಿಗೆ ಬೀಳುತ್ತಿದ್ದೆ,'' ಎಂದು 85 ವರ್ಷದ ವಿಜಯಪತ್ ಹೇಳಿದ್ದಾರೆ.
ಸಿಂಘಾನಿಯಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, "ಪೋಷಕರು ತಮ್ಮ ಮಕ್ಕಳಿಗೆ ಎಲ್ಲ ಆಸ್ತಿಯನ್ನೂ ನೀಡುವ ಮೊದಲು ಬಹಳ ಎಚ್ಚರಿಕೆಯಿಂದ ಯೋಚಿಸಬೇಕು. ನೀವು ಕೊಡಬೇಡಿ ಎಂದು ನಾನು ಹೇಳುತ್ತಿಲ್ಲ. ನಿಮ್ಮ ಸಾವಿನ ನಂತರ ಕೊಡಿ ಎಂದು ಮಾತ್ರ ಹೇಳುತ್ತಿದ್ದೇನೆ. ನಿಮ್ಮ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ನೀಡಬೇಡಿ. ಕೊಟ್ಟರೇ, ನೀವು ಅದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗಬಹುದು,'' ಎಂದು ತಮ್ಮ ಅನುಭವದ ಪಾಠವನ್ನು ಹಂಚಿಕೊಂಡಿದ್ದಾರೆ.
2015ರಲ್ಲಿ ವಿಜಯಪತ್ ಸಿಂಘಾನಿಯಾ ಅವರು ತಮ್ಮ ಎಲ್ಲಾ ಷೇರುಗಳು ಮತ್ತು ಕಂಪನಿಯನ್ನು ತಮ್ಮ ಮಗ ಗೌತಮ್ ಸಿಂಘಾನಿಯಾಗೆ ನೀಡಿದರು. ಇದಾದ ನಂತರ ತಂದೆ-ಮಗನ ಸಂಬಂಧ ಹದಗೆಡಲಾರಂಭಿಸಿತು. ಬಾಡಿಗೆ ಮನೆಯಲ್ಲಿ ವಿಜಯಪತ್ ವಾಸಿಸುವ ಸ್ಥಿತಿ ಬಂದಿದೆ. ಮಗ ಕಾರು ಮತ್ತು ಚಾಲಕನನ್ನೂ ಕಿತ್ತುಕೊಂಡಿದ್ದಾನೆ ಎಂದು ಹಿಂದೊಮ್ಮೆ ದೂರಿದ್ದರು.