ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ- ಪ್ರಾಧ್ಯಾಪಕನ ಅಮಾನತು
Thursday, November 30, 2023
ಕಾಸರಗೋಡು: ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೆರಿಯದಲ್ಲಿರುವ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ| ಇಪ್ಟಿಕರ್ ಅಹಮ್ಮದ್‌ನನ್ನು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ. ಅವರು ಇಂಗ್ಲಿಷ್ ತುಲಾತ್ಮಕ ಅಧ್ಯಯನ ವಿಭಾಗದ ಅಸಿಸ್ಟೆಂಟ್ ಪ್ರೊಫೇಸರ್ ಆಗಿದ್ದರು.
ದೂರಿನ ಕುರಿತು ವಿಶ್ವವಿದ್ಯಾನಿಲಯ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ದೂರಿನಲ್ಲಿ ಸತ್ಯಾಂಶ ಇದೆಯೆಂದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಅಮಾನತು ಕ್ರಮ ತೆಗೆದುಕೊಳ್ಳಲಾಗಿದೆ. ಅಧ್ಯಾಪಕ ಎರಡು ವಾರ ತರಗತಿ ನಡೆಸುವುದನ್ನು ತಡೆಹಿಡಿಯಲಾಗಿದೆ. ಅಮಾನತು ಕ್ರಮದ ಮಧ್ಯೆ ಅನುಮತಿಯಿಲ್ಲದೆ ವಿಶ್ವವಿದ್ಯಾನಿಲಯ ಕೇಂದ್ರವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲವೆಂದು ವೈಸ್ ಚಾನ್ಸಲರ್ ಹೊಣೆಗಾರಿಕೆಯುಳ್ಳ ಡಾ| ಕೆ.ಸಿ.ಬೈಜು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ನ. 13ರಂದು ದೂರಿಗೆ ಕಾರಣವಾದ ಘಟನೆ ನಡೆದಿದೆ. ಇಂಟರ್ನಲ್ ಪರೀಕ್ಷೆ ಸಂದರ್ಭದಲ್ಲಿ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅನುಚಿತವಾಗಿ ವರ್ತಿಸಿದಾಗಿಯೂ, ಅನಂತರ ತರಗತಿಯಲ್ಲಿ ಅಶ್ಲೀಲವಾಗಿ ಮಾತನಾಡಿರುವುದಾಗಿ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಅಧ್ಯಾಪಕನ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಚಳವಳಿ ನಡೆಸಿದ್ದವು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೇ ರೀತಿಯ ಆರೋಪಗಳು ಈ ಹಿಂದೆಯೂ ಅಧ್ಯಾಪಕನ ವಿರುದ್ಧ ಕೇಳಿಬಂದಿತ್ತು ಎನ್ನಲಾಗಿದೆ.