ಮಂಗಳೂರು: ಕ್ರೀಡೆಯಲ್ಲಿ ದೊರಕದ ಬಹುಮಾನ - ಮನನೊಂದು ಸಾವಿಗೆ ಶರಣಾದ ವಿದ್ಯಾರ್ಥಿನಿ
Monday, November 27, 2023
ಮಂಗಳೂರು: ರಾಷ್ಟ್ರೀಯಮಟ್ಟದ ಕ್ರೀಡಾ ಪಂದ್ಯಾಟದಲ್ಲಿ ಬಹುಮಾನ ದೊರಕದಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.
ನಿಶಾ (17) ಮೃತಪಟ್ಟ ವಿದ್ಯಾರ್ಥಿನಿ.
ನಿಶಾ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ. ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಿಶಾ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ, ಅವರಿಗೆ ಬಹುಮಾನ ದೊರಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ನಿಶಾ, ಖಿನ್ನತೆಗೆ ಒಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನ ಸೇವಿಸಿದ್ದರು.
ತೀವ್ರ ವಾಂತಿ ಬಂದ ಹಿನ್ನೆಲೆಯಲ್ಲಿ ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿದ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ನಿಶಾರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಪುತ್ತೂರಿನಿಂದ ಮಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರು. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಶಾ, ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಪುತ್ತೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.