ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವುಗೈದ ಕಳ್ಳನೊಂದಿಗೆ ಪೊಲೀಸಪ್ಪನೂ ಜೈಲಿಗೆ
Wednesday, November 8, 2023
ಬೆಂಗಳೂರು: ಸಂಚಾರದಲ್ಲಿದ್ದ ರೈಲಿನಲ್ಲಿಯೇ ಪ್ರಯಾಣಿಕರ ಬ್ಯಾಗ್ ಕಳವು ಮಾಡಿರುವ ಆರೋಪದಲ್ಲಿ ರೈಲ್ವೆ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರನ್ನು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣವಾರ ನಿವಾಸಿ ಸಾಬಣ್ಣ (38) ಹಾಗೂ ಚಿಕ್ಕಬಳ್ಳಾಪುರ ರೈಲ್ವೆ ಹೊರ ಉಪಠಾಣೆ ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮ ರೆಡ್ಡಿ(38) ಬಂಧಿತ ಆರೋಪಿಗಳು. ಇದೀಗ ಸಿದ್ದರಾಮನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಸಾಬಣ್ಣ ಹಾಗೂ ರಾಯಚೂರು ಮೂಲದ ಸಿದ್ದರಾಮರದ್ದು ಹಳೆಯ ಪರಿಚಯ. ರಾಯಚೂರಿನಲ್ಲಿ ಹೆಡ್‌ಕಾನ್‌ಸ್ಟೆಬಲ್ ಸಿದ್ದರಾಮ ರೆಡ್ಡಿ, ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೊಬೈಲ್ ಕಳವು ಪ್ರಕರಣದಲ್ಲಿ ಸಾಬಣ್ಣ ಬಂಧಿಯಾಗಿದ್ದ. ಈ ಸಂದರ್ಭ ಸಿದ್ದರಾಮ ರೆಡ್ಡಿ, ವಿಚಾರಣೆ ನಡೆಸುವ ವೇಳೆ ಪರಿಚಯವಾಗಿತ್ತು. ಅಲ್ಲದೆ, ಹಳೆಯ ಆರೋಪಿಗಳ ಸ್ವ-ವಿವರ ಒಳಗೊಂಡ ಎಂಒಬಿ ಕಾರ್ಡ್‌ನ್ನು ಸಾಬಣ್ಣನ ವಿರುದ್ಧ ತೆರೆಯಲಾಗಿತ್ತು. ಕಾಲ ಕಾಲಕ್ಕೆ ಸಾಬಣ್ಣನನ್ನು ಕರೆದು ವಿಚಾರಣೆ ಮಾಡಲಾಗಿತ್ತು. ಇಬ್ಬರ ನಡುವೆ ಮತ್ತಷ್ಟು ಸ್ನೇಹ ಬೆಳದಿತ್ತು. ಕೊನೆಗೊಂದು ಸಾಬಣ್ಣನೊಂದಿಗೆ ಸೇರಿ ಅಪರಾಧ ಪ್ರಕರಣ ಎಸಗಿದ ಆರೋಪದ ಮೇಲೆ ಸಿದ್ದರಾಮ ರೆಡ್ಡಿ ಸೇವೆಯಿಂದ ಅಮಾನತುಗೊಂಡಿದ್ದ.
ಅಮಾನತು ತೆರವು ಮಾಡಿಕೊಂಡು ಸಿದ್ದರಾಮ ರೆಡ್ಡಿ, ಬೆಂಗಳೂರು ನಗರಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಮತ್ತೊಂದೆಡೆ ಸಾಬಣ್ಣ, ರಾಯಚೂರು ಬಿಟ್ಟು ಬೆಂಗಳೂರಿಗೆ ಬಂದು ಕೂಲಿ ಕೆಲಸ ಮತ್ತು ಸಣ್ಣಪುಟ್ಟ ಅಪರಾಧ ಮಾಡಿಕೊಂಡಿದ್ದ. ಈ ನಡುವೆ ಸಾಬಣ್ಣ ಮತ್ತು ಸಿದ್ದರಾಮ ಆಕಸ್ಮಿಕವಾಗಿ ಮತ್ತೆ ಜೊತೆಯಾಗಿದ್ದಾರೆ. ಮತ್ತೆ ಕಳ್ಳತನ ಶುರು ಮಾಡಿದರೇ ನಾನು ಸಹಾಯ ಮಾಡುವುದಾಗಿ ಸಿದ್ದರಾಮ ರೆಡ್ಡಿ, ಆರೋಪಿ ಸಾಬಣ್ಣನಿಗೆ ಧೈರ್ಯ ತುಂಬಿ ಒಟ್ಟಿಗೆ ಕಳ್ಳತನಕ್ಕೆ ಇಳಿದಿದ್ದರು. ಯಾವ ರೈಲು ಯಾವ ಸಮಯಕ್ಕೆ ಎಲ್ಲಿಗೆ ಬರಲಿದೆ ಎಂಬ ಮಾಹಿತಿ ತಿಳಿದಿದ್ದ ಸಿದ್ದರಾಮ ರೆಡ್ಡಿ, ಎಲ್ಲವನ್ನು ಸಾಬಣ್ಣನಿಗೆ ಮಾಹಿತಿ ಕೊಟ್ಟಿದ್ದ. ಪೊಲೀಸ್ ಇಲಾಖೆಯ ಕಾರಿನಲ್ಲಿ ಸಿದ್ದರಾಮ ರೆಡ್ಡಿ, ಆರೋಪಿ ಸಾಬಣ್ಣನನ್ನು ಕರೆದುಕೊಂಡು ಬೆಳಗಿನ ಜಾವ 3 ರಿಂದ 4 ಗಂಟೆ ನಡುವೆ ಕೆ.ಆರ್.ಪುರ, ಬಾಣಸವಾಡಿ ಅಥವಾ ಟಿನ್ ಫ್ಯಾಕ್ಟರಿ ಬಳಿ ಬಿಡುತ್ತಿದ್ದ.
ರೈಲುಗಳು ನಿಧಾನವಾಗಿ ಚಲಿಸುತ್ತಿದ್ದಾಗ ಸಾಬಣ್ಣ, ರೈಲು ಏರಿ ಎಲ್ಲ ಬೋಗಿಗಳಲ್ಲಿ ಸುತ್ತಾಡುತ್ತಿದ್ದ. ಸೀಟ್ ಮೇಲೆ ಬ್ಯಾಗ್ ಇಟ್ಟು ಅಥವಾ ನಿದ್ದೆ ಮಂಪರಿನಲ್ಲಿ ಇರುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಕದ್ದು ಸಿದ್ದರಾಮ ರೆಡ್ಡಿಗೆ ಕರೆ ಮಾಡಿ ಮಾರ್ಗಮಧ್ಯೆದಲ್ಲಿಯೇ ಇಳಿದುಕೊಳ್ಳುತ್ತಿದ್ದ. ಅಲ್ಲಿಂದ ಒಟ್ಟಿಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಅಥವಾ ಹಂಚಿಕೊಳ್ಳುತ್ತಿದ್ದರು ಎಂದು ರೈಲ್ವೇ ಎಸ್‌ಪಿ ಡಾ.ಸೌಮ್ಯಲತಾ ಮಾಹಿತಿ ನೀಡಿದ್ದಾರೆ.