ಮಂಗಳೂರು: ಪ್ರೀತಿಸುತ್ತಿದ್ದಾಕೆ ಸುತ್ತಾಟಕ್ಕೆ ಬಂದಿಲ್ಲವೆಂದು ಪಿಜಿಗೆ ಕಲ್ಲು ತೂರಿ ದಾಂಧಲೆ - ಯುವಕನ ಥಳಿಸಿ ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
Friday, November 3, 2023
ಮಂಗಳೂರು: ಪ್ರೀತಿಸುತ್ತಿದ್ದ ಯುವತಿ ತನ್ನೊಂದಿಗೆ ಸುತ್ತಾಟಕ್ಕೆ ಬರಲು ನಿರಾಕರಿಸಿದಲೆಂದು ಕುಪಿತಗೊಂಡ ಪ್ರಿಯಕರ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ನಗರದ ಆಗ್ನೆಸ್ ಕಾಲೇಜು ಬಳಿ ಗುರುವಾರ ರಾತ್ರಿ ನಡೆದಿದೆ.
ಸುಳ್ಯ ಮೂಲದ ವಿವೇಕ್ (18) ಎಂಬಾತ ಕೃತ್ಯ ಎಸಗಿದ ಯುವಕ. ವಿವೇಕ್ ಮಂಗಳೂರಿನಲ್ಲಿ ಲೈಟಿಂಗ್ ಕೆಲಸ ಮಾಡುತ್ತಿದ್ದ. ಈತನಿಗೆ ಆ್ಯಗ್ನೆಸ್ ಬಳಿಯ ವಿದ್ಯಾರ್ಥಿನಿಯರ ಪಿಜಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಗುರುವಾರ ಸಂಜೆ ಆಕೆಗೆ ಫೋನ್ ಮಾಡಿ, ಹೊರಗೆ ಸುತ್ತಾಡಲು ಹೋಗೋಣ ಎಂದು ಕೇಳಿಕೊಂಡಿದ್ದಾನೆ.
ಆದರೆ ಯುವತಿ ಕೆಲಸವಿದೆ ಈಗ ಬರಲು ಆಗುವುದಿಲ್ಲ ಎಂದು ಹೇಳಿ ನಿರಾಕರಣೆ ಮಾಡಿದ್ದಳು. ಪದೇ ಪದೇ ಕರೆ ಮಾಡಿದರೂ ಆಕೆ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕ ಪಿಜಿ ಹಾಸ್ಟೆಲ್ ಮೇಲೆ ಕಲ್ಲು ತೂರಿದ್ದಾನೆ. ಹಾಸ್ಟೆಲ್ ಕಿಟಕಿ, ಗಾಜು ಒಡೆದು ಹೋಗಿದ್ದು ದಾಂಧಲೆಗೆ ಯತ್ನಿಸಿದ ಯುವಕನನ್ನು ಕೂಡಲೇ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ರಾತ್ರಿ ಹತ್ತು ಗಂಟೆ ವೇಳೆಗೆ ಯುವಕನನ್ನು ಹಿಡಿದು ಥಳಿಸಿ ಕೂಡಿಹಾಕಿದ್ದರು. ಬಳಿಕ ಕದ್ರಿ ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಲ್ಲು ತೂರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.