ಪ್ರಿಯಕರನ ಮೊಬೈಲ್ ನಲ್ಲಿ 13 ಸಾವಿರ ಮಂದಿ ಯುವತಿಯರ ನಗ್ನ ಫೋಟೊಗಳನ್ನು ಕಂಡು ಶಾಕ್ ಗೊಳಗಾದ ಪ್ರೇಯಸಿ
Friday, December 1, 2023
ಬೆಂಗಳೂರು: ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋಗಳನ್ನು ನೋಡಿ ಶಾಕ್ ಆದ ಪ್ರೇಯಸಿಯೊಬ್ಬಳು ಬೆಂಗಳೂರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಿಯಕರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಯುವತಿ, ತನ್ನ ಸಹೋದ್ಯೋಗಿ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇಬ್ಬರೂ ಜೊತೆಯಾಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ಖಾಸಗಿ ಕ್ಷಣಗಳನ್ನು ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಡಿದ್ದ. ಇದನ್ನು ಗಮನಿಸಿದ್ದ ಯುವತಿಯು ಪ್ರಿಯಕರ ಶೌಚಾಲಯಕ್ಕೆ ಹೋದಾಗ ಆತನ ಮೊಬೈಲ್ ತೆಗೆದು ತನ್ನ ಫೋಟೊ, ವೀಡಿಯೋಗಳನ್ನು ಡಿಲೀಟ್ ಮಾಡಲು ಮುಂದಾಗಿದ್ದಳು. ಆಗ ಆತನ ಮೊಬೈಲ್ ನಲ್ಲಿ ಬರೋಬರಿ 13 ಸಾವಿರ ಯುವತಿಯರ ನಗ್ನ ಫೋಟೋಗಳು, ವಿಡಿಯೋಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ.
ವಿಪರ್ಯಾಸವೆಂದರೆ ಈ ಪೈಕಿ ತನ್ನದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಯುವತಿಯರ ಮಾದಕ ಫೋಟೊಗಳಿದ್ದವು. ಇದನ್ನೆಲ್ಲ ಕಂಡು ಶಾಕ್ ಆದ ಯುವತಿ, ಪ್ರಿಯಕರನೊಂದಿಗೆ ಜಗಳ ತೆಗೆದು ಆತನಿಂದ ದೂರವಾಗಿದ್ದಾಳೆ. ಬಳಿಕ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.
ಅಧಿಕಾರಿ ವರ್ಗ, ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆತ ಮಾತ್ರ ತಾನು ಯಾವ ಯುವತಿಗೂ ತೊಂದರೆ ಕೊಟ್ಟಿಲ್ಲ ಎಂದಿದ್ದಾನೆ. ಇಷ್ಟೊಂದು ಯುವತಿಯರ ಅರೆನಗ್ನ ಫೋಟೋಗಳನ್ನು ಹೇಗೆ ಸಂಗ್ರಹಿಸಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ಯುವತಿಯರ ಫೋಟೊ ತೆಗೆದು ಮಾರ್ಫ್ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಂಪನಿ ಅಧಿಕಾರಿಗಳೇ ನ.23ರಂದು ಕೇಂದ್ರ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಬಳಿಕ ಮಂಗಳೂರು ಮೂಲದ ಆದಿತ್ಯ ಸಂತೋಷ್ ಎಂಬ ಟೆಕ್ಕಿಯನ್ನು ಬಂಧಿಸಿದ್ದಾರೆ. ಹುಡುಗಿಯರ ಫೋಟೊ ಮಾರ್ಫ್ ಮಾಡಿ ಈ ರೀತಿಯಲ್ಲಿ ಸಂಗ್ರಹಿಸಿಟ್ಟಿರುವುದಾಗಿ ಯುವಕ ಹೇಳಿದ್ದಾನೆ.