ಮಂಗಳೂರು: ವಿಜೃಂಭಣೆಯಿಂದ ನಡೆಯುತ್ತಿದೆ 'ಮಂಗಳೂರು ಕಂಬಳ' - 170 ಜೊತೆ ಕೋಣಗಳು ಭಾಗಿ
Saturday, December 30, 2023
ಮಂಗಳೂರು: ಕ್ಯಾ.ಬ್ರಿಜೇಶ್ ಚೌಟ ಅವರ ಸಾರಥ್ಯದಲ್ಲಿ ನಡೆಯುವ ಏಳನೇ ವರ್ಷದ 'ಮಂಗಳೂರು ಕಂಬಳ' ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಸಂಭ್ರಮದಿಂದ ನಡೆಯುತ್ತಿದೆ.
ರಾಮ - ಲಕ್ಷ್ಮಣ ಜೋಡುಕರೆಯಲ್ಲಿ ನಡೆಯುವ ಏಳನೇ ವರ್ಷದ ಕಂಬಳ ಡಿಸೆಂಬರ್ 30ರಂದು ಬೆಳಗ್ಗೆ 9ಗಂಟೆಗೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ ಉದ್ಘಾಟನೆಗೊಂಡಿತು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕಂಬಳ ಉದ್ಘಾಟಿಸಿದರು. ಸುಮಾರು 170 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸಿದೆ.
ಮಂಗಳೂರು ಕಂಬಳದಲ್ಲಿ ಕಂಬಳದ ಆರೂ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನೆಹಲಗೆ, ಹಗ್ಗ, ನೇಗಿಲು ವಿಭಾಗದಲ್ಲಿ ಗೆದ್ದ ಕೋಣಗಳಿಗೆ ಪ್ರಥಮ ಎರಡು ಪವನ್, ದ್ವಿತೀಯ ಒಂದು ಪವನ್ ಬಂಗಾರ ಬಹುಮಾನ ನೀಡಲಾಗುತ್ತದೆ. ಅಡ್ಡಹಲಗೆ, ಹಗ್ಗ, ನೇಗಿಲು ವಿಭಾಗದಲ್ಲಿ ಪ್ರಥಮ ಒಂದು ಪವನ್, ದ್ವಿತೀಯ ಅರ್ಧ ಪವನ್ ಬಂಗಾರ ಬಹುಮಾನ ನೀಡಲಾಗುತ್ತದೆ. ನಾಳೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯುತ್ತದೆ. ಇದರ ಜೊತೆಗೆ ರೀಲ್ಸ್, ಫೋಟೊಗ್ರಾಫಿ ಹಾಗೂ ಚಿತ್ರ ರಚನಾ ಸ್ಪರ್ಧೆಗಳು ನಡೆಯಲಿದೆ.