ರಾಜ್ಯದಲ್ಲಿ 34 JN.1 ಸೋಂಕಿತ ಪ್ರಕರಣಗಳು - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Monday, December 25, 2023
ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮೊ ಸಿಕ್ವೇನ್ಸಿಂಗ್ ನಲ್ಲಿ ಒಮೆಕ್ರಾನ್ ವೈರಾಣು ಉಪತಳಿ JN.1 ಪತ್ತೆಯಾಗಿದೆ. ಸುಮಾರು 34 ಕೋವಿಡ್ ಸೊಂಕಿತರಿಗೆ JN.1 ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರಿಗೆ ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, JN.1 ವೈರಾಣು ರಾಜ್ಯದಲ್ಲಿ ಇರಬಹುದು ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ ಅದು ಜಿನೋಮೊ ಸಿಕ್ವೆನ್ಸಿಂಗ್ ನಲ್ಲೇ ನಮಗೆ ಸ್ಪಷ್ಟವಾಗಿ ಗೊತ್ತಾಗೊದು. ಹೀಗಾಗಿ ಜಿನೋಮೊ ಸಿಕ್ವೆನ್ಸಿಂಗ್ ಗೆ ಕಳಿಸಿದ್ವಿ. ಇದೀಗ ವರದಿ ಬಂದಿದ್ದು, ರಾಜ್ಯದಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿದೆ ಎಂದರು.
ಆದರೆ ರಾಜ್ಯದ ಜನರು ಕೋವಿಡ್ ಸಂಬಂಧ ಆತಂಕ ಪಡುವ ಅಗತ್ಯವಿಲ್ಲ. JN.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನ ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನ ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ದರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜೆ.ಎನ್.1 ಪ್ರಕರಣಗಳ ಸಂಬಂಧ ಯಾರು ಹೊಸದಾಗಿ ಗಾಬರಿಪಡುವ ಅಗತ್ಯವಿಲ್ಲ. ಬಹುತೇಕ ಜೆ.ಎನ್ 1 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಬೆಂಗಳೂರಿನಲ್ಲಿ - 20, ಮೈಸೂರು - 4, ಮಂಡ್ಯ - 3 ಸೇರಿದಂತೆ ರಾಮನಗರದಲ್ಲಿ - 1 ಒಮೆಕ್ರಾನ್ ಉಪತಳಿ JN.1 ಪತ್ತೆಯಾಗಿದ್ದು, ಇಲ್ಲಿಯ ವರೆಗೆ ಕೋವಿಡ್ ಬಂದವರಲ್ಲಿ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಸಾವನ್ನಪ್ಪಿದವರಲ್ಲೂ JN.1 ಪಾಜಿಟಿವ್ ಇದ್ದಿದ್ದು ವರದಿಯಲ್ಲಿ ಬೆಳಕಿಗೆ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಸಮಿತಿ ಸಭೆ ನಾಳೆ ನಡೆಯಲಿದೆ. ನಾಳೆಯ ಸಭೆಯಲ್ಲಿ ಜೆ.ಎನ್ 1 ಪ್ರಕರಣಗಳು ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರು ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಸಲಹೆ. ಇನ್ನು 60 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆ ಹೊಂದಿದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಜೆ.ಎನ್ .1 ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದು ಮಾರ್ಗಸೂಚಿ ಇಲ್ಲ. ಹೊಸ ವರ್ಷಾಚರಣೆಗೆ ನಿರ್ಭಂದ ಹೇರುವು ಬಗ್ಗೆ ಯಾವುದೇ ಚಿಂತನೆಗಳಲ್ಲ.. ನಾಳೆಯ ಸಭೆಯಲ್ಲಿ Tac ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದೆ ಯಾವ ಕ್ರಮಗಳ ಬಗ್ಗೆ ತೀರ್ಮಾನಿಸ್ತೇವೆ. ಜನಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಜಾರಿ ಮಾಡ್ತಿಲ್ಲ.ಆ ಮಟ್ಟಕ್ಕೆ ಪ್ಯಾನಿಕ್ ಆಗುವ ಅಗತ್ಯವಿಲ್ಲ. ಪಾಸಿಟಿವ್ ಬಂದವರು ಐಸೊಲೇಷನ್ ನಲ್ಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.