ಅಕ್ರಮ ಆಸ್ತಿ ಗಳಿಕೆ ತಮಿಳುನಾಡು ಸಚಿವ ಪೊನ್ನುಡಿಗೆ ಮೂರು ವರ್ಷ ಜೈಲುಶಿಕ್ಷೆ - ಸಚಿವ ಸಹಿತ ಅವರ ಪತ್ನಿಗೆ ತಲಾ 50 ಲಕ್ಷ ರೂ. ದಂಡ
Thursday, December 21, 2023
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಆಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದ ಉನ್ನತ ಶಿಕ್ಷಣ ಸಚಿವ ಕೆ.ಪೊನ್ನುಡಿ ಅವರಿಗೆ ಮದ್ರಾಸ್ ಹೈಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ಸಚಿವರಿಗೆ ಹಾಗೂ ಅವರ ಪತ್ನಿಗೆ ತಲಾ 50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮಂಗಳವಾರ, ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಪೊನ್ನುಡಿ ಮತ್ತು ಅವರ ಪತ್ನಿಯನ್ನು ದೋಷಿ ಎಂದು ಘೋಷಿಸಿದೆ. 2006 ರಿಂದ 2011ರವರೆಗೆ ಪೊನ್ನುಡಿ ಅವರು ಡಿಎಂಕೆ ನೇತೃತ್ವದ ಆಡಳಿತದಲ್ಲಿ ಸಚಿವರಾಗಿದ್ದರು. ಈ ವೇಳೆ ಅವರ ಹೆಸರಲ್ಲಿ ಮತ್ತು ಅವರ ಪತ್ನಿ ಸುಮಾರು 65.99% ಕ್ಕೂ ಅಧಿಕ ಆದಾಯ ಗಳಿಸಿದ್ದರು.
ಹೆಚ್ಚಿನ ಆದಾಯ ಗಳಿಸಿದ್ದರೂ 2016 ರಲ್ಲಿ ವಿಲ್ಲುಪುರಂನ ವಿಚಾರಣಾ ನ್ಯಾಯಾಲಯವು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಮಂಗಳವಾರ, ಹೈಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಆರೋಪವು ಇಬ್ಬರೂ ಆರೋಪಿಗಳ ವಿರುದ್ಧ ಸಾಬೀತಾಗಿದೆ.
ಸದ್ಯ ಪೊನ್ನುಡಿಯ ಉನ್ನತ ಶಿಕ್ಷಣ ಖಾತೆಯನ್ನು ಅವರ ಸಹೋದ್ಯೋಗಿಗಳಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ. ಕಾನೂನಿನಡಿಯಲ್ಲಿ ಶಾಸಕಾಂಗ ವ್ಯವಸ್ಥೆಯ ಸದಸ್ಯರು ತಪ್ಪಿತಸ್ಥರಾದರೆ ಸಂಸತ್ತು ಅಥವಾ ವಿಧಾನಸಭೆಯಿಂದ ಅವರು ಅನರ್ಹರಾಗುತ್ತಾರೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿಯವರು, ಪೊನ್ನುಡಿಯವರನ್ನು ಸಂಪುಟದಿಂದ ಕೈಬಿಡಬೇಕೆಂದು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಒತ್ತಾಯಿಸಿದ ಬೆನ್ನಲ್ಲೇ ಈ ಶಿಕ್ಷೆ ವಿಧಿಸಲಾಗಿದೆ. ಪೊನ್ನುಡಿ ಪ್ರಕರಣವು ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವನ್ನು ಹೆಚ್ಚಿಸಿತ್ತು.