ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮಗು ಸೇರಿ ಒಂದೇ ಕುಟುಂಬದ 8 ಮಂದಿ ಸಜೀವ ದಹನ
Sunday, December 10, 2023
ಲಕ್ನೋ: ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ 8 ಮಂದಿ ಸಜೀವ ದಹನಗೊಂಡ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭೋಜಿಪುರದಲ್ಲಿ ಸಂಭವಿಸಿದೆ.
ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹತ್ತಿಕೊಂಡು ಧಗಧಗಿಸಿ ಹೊತ್ತಿ ಉರಿದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರ ಪ್ರಕಾರ, ಮೃತರಲ್ಲಿ ಏಳು ಮಂದಿ ವಯಸ್ಕರು ಹಾಗೂ ಒಂದು ಮಗು ಸೇರಿದೆ. ಮೃತಪಟ್ಟ ಕುಟುಂಬ ಉತ್ತರಾಖಂಡದ ಬಹೇದಿ ಗ್ರಾಮವರಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಸಂಬಂಧಿಕರ ಮದುವೆಗೆ ಹೊರಟಿದ್ದರು. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟ್ರಕ್‌ಗೆ ಕಾರು ಡಿಕ್ಕಿಯಾದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಡೋರ್ ಜಾಮ್ ಆಗಿದ್ದರಿಂದ ಒಳಗಿದ್ದವರು ಪಾರಾಗಲು ಸಾಧ್ಯವಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.