-->
ಮೂಡುಬಿದಿರೆ: ವಿರಾಸತ್ ವೇದಿಕೆಯಲ್ಲಿ ಗಮನಸೆಳೆದ ಮಲ್ಲಕಂಬ, ಬೃಂದಾವನ ವೇಣು, ಗಣೇಶ ಸ್ತುತಿ, ಯಕ್ಷ ಪ್ರಯೋಗದ ಧೀಂಕಿಟ Alvas

ಮೂಡುಬಿದಿರೆ: ವಿರಾಸತ್ ವೇದಿಕೆಯಲ್ಲಿ ಗಮನಸೆಳೆದ ಮಲ್ಲಕಂಬ, ಬೃಂದಾವನ ವೇಣು, ಗಣೇಶ ಸ್ತುತಿ, ಯಕ್ಷ ಪ್ರಯೋಗದ ಧೀಂಕಿಟ Alvas




ಮೂಡುಬಿದಿರೆ: ಇಲ್ಲಿನ ಆಳ್ವಾಸ್ ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 29ನೇ ಆಳ್ವಾಸ್ ವಿರಾಸತ್‍ನ ಅಂತಿಮ ದಿನವಾದ ಭಾನುವಾರ ಆಳ್ವಾಸ್ ಸಾಂಸ್ಕೃತಿಕ ಹಾಗೂ ಕ್ರೀಡಾ ತಂಡದ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಮಲ್ಲಕಂಬ, ಬೃಂದಾವನ ವೇಣು, ಗಣೇಶ ಸ್ತುತಿ, ಯಕ್ಷ ಪ್ರಯೋಗದ ಧೀಂಕಿಟ ಪ್ರಯೋಗ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಮಲ್ಲಕಂಬ:
ಆಳ್ವಾಸ್ ಕಾಲೇಜಿನ ಸುಮಾರು 130 ವಿದ್ಯಾರ್ಥಿಗಳು ಏಕಕಾಲದಲ್ಲಿ ಮಲ್ಲಕಂಬ ಸಾಹಸ ಪ್ರದರ್ಶಿಸಿ ಪ್ರೇಕ್ಷಕರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದರು.
ಮಲ್ಲಕಂಬವೆಂಬ ಅಪ್ಪಟ ದೇಶೀಯ ಕ್ರೀಡೆ, ದೇಶಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಆಳ್ವಾಸ್, ಈ ಮಲ್ಲಕಂಬ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕ್ರೀಡೆಯಾಗಿದ್ದ ಮಲ್ಲಕಂಬಕ್ಕೆ ಪ್ರೇಕ್ಷಕರನ್ನು ಸೆಳೆಯಬೇಕು ಎಂಬ ದೂರದೃಷ್ಟಿತ್ವದಿಂದ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಅದಕ್ಕೊಂದು ಕಲಾರೂಪ ನೀಡಿದ್ದಾರೆ. ಆದ್ದರಿಂದ ಮಲ್ಲಕಂಬವು ವೇದಿಕೆ ಮೇಲೇರುವಂತಾಗಿದೆ. ಜೋತು ಬಿದ್ದ ಹಗ್ಗದಲ್ಲಿ ನೇತಾಡುತ್ತಿರುವ ವಿದ್ಯಾರ್ಥಿನಿಯರ ಕಸರತ್ತು ಪ್ರೇಕ್ಷಕರನ್ನು ಮೂಕಸ್ಮಿತರನ್ನಾಗಿ ಮಾಡಿತು.
ಸಾಹಸ ಕ್ರೀಡೆಯೊಂದು ಕಲಾರಸಿರಕರನ್ನು ರಂಜಿಸಿತು. ದಶರಂಗ, ವೇಲ್, ತಿರುವು, ಯೋಗಾಸನ ಮುಂತಾದ ವಿಶೇಷ ಚಾಕಚಕ್ಯತೆ, ಚಪಲತೆ, ವೇಗ ಹಾಗೂ ಮೈಮಣಿತದ ಆಧಾರಗಳನ್ನು ಮಲ್ಲಕಂಬ ಹೊಂದಿದ್ದು, ನೋಡುಗರನ್ನು ಎವೆಯಿಕ್ಕದೇ ನೋಡುವಂತೆ ಮಾಡಿತು.
ವಿಶ್ವ ಮಲ್ಲಕಂಬ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ 6 ಪಟುಗಳಲ್ಲಿ ಓರ್ವನು ಆಳ್ವಾಸ್ ವಿದ್ಯಾರ್ಥಿ. ಈ ಬಾರಿ ರಾಜ್ಯವನ್ನು ಪ್ರತಿನಿಧಿಸುವ 12 ಮಂದಿಯೂ ಆಳ್ವಾಸ್ ವಿದ್ಯಾರ್ಥಿಗಳು.

ಬೃಂದಾವನ ವೇಣು:
ನೃತ್ಯ ಸಂಯೋಜಕಿ ವಿದುಷಿ ಪ್ರವಿತಾ ಅಶೋಕ್ ಅವರ ಶಿಷ್ಯೆಯರಿಂದ ಸೇಂಟ್ ಬಾನು ದಾಸ್ ಸಂಗೀತ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ಭರತನಾಟ್ಯದ ನೃತ್ಯ ರೂಪಕ "ಬೃಂದಾವನ ವೇಣು " ಮನಸೂರೆಗೊಂಡಿತು.
ಆದಿ ತಾಳ ಮತ್ತು ಭೀಮ್ ಪಾಲಸ್ ರಾಗದಿಂದ ಆರಿಸಿದ  ಭರತ ನಾಟ್ಯದ ಒಂದು ಪ್ರಕಾರ "ಬೃಂದಾವನ ವೇಣು " ನಾಟ್ಯದಲ್ಲಿ ಬಾಲಕಿಯರು ಪ್ರೇಕ್ಷಕರ ಹೃದಯ ಗೆದ್ದರು. ವೇಣು ಸ್ತುತಿಯು ಮನ ಸೆಳೆಯಿತು.

ಶ್ರೀ ಗಣೇಶ ವೈಭವ:
ಬಿ.ವಿ. ಕಾರಂತರು ಬರೆದ 'ಗಜವದನ ಹೇ ರಂಭಾ..' ರಂಗಗೀತೆಯನ್ನು ಖ್ಯಾತ ಗಾಯಕ  ವಾಸುಕಿ ವೈಭವ್ ಹಾಡಿದ್ದು ಜನಪ್ರಿಯಗೊಂಡಿದೆ. ಈ 'ಗಜವದನ ಹೇ ರಂಭಾ' ರಂಗಗೀತೆಗೆ  ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಅರೆಹೊಳೆ ಪ್ರತಿಷ್ಠಾನ ತಂಡವು ' ಶ್ರೀ ಗಣೇಶ ವೈಭವ' ನೃತ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

ಯಕ್ಷಗಾನ ರೂಪಕ:
ದೇಶೀಯ ಕಲೆಗೆ ನೆಲೆಯನ್ನು ನೀಡಿ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದವರು ಡಾ.ಎಂ.ಮೋಹನ ಆಳ್ವ ಅವರು. ಈ ಮುತುವರ್ಜಿಯಿಂದಲೇ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ರೂಪುಗೊಂಡಿದೆ. ಈ ತಂಡವು ಪ್ರಸ್ತುತ ಪಡಿಸುವ ಪೃಥ್ವೀಶ್ ಶೆಟ್ಟಿಗಾರ್ ಹಾಗೂ ಶಬರೀಶ್ ಮುನಿಯಾಲ್ ನಿರ್ದೇಶನದ 'ಶಂಕರಾರ್ಧ ಶರೀರಿಣಿ' ಪ್ರಸಂಗವು ಬಡಗುತಿಟ್ಟಿನ ಯಕ್ಷ ಪ್ರಯೋಗ ಎಲ್ಲರ ಗಮನ ಸೆಳೆಯಿತು. ಮಯೂರ್ ನಾಯ್ಗ ಸಾಹಿತ್ಯಕ್ಕೆ, ಶೇಖರ್ ಡಿ ಶೆಟ್ಟಿಗಾರ್ ಮಾರ್ಗದರ್ಶನ ನೀಡಿದ್ದಾರೆ. ಶಿವ -ಸತಿಯರ ಅವಿನಾಶಿ ಪ್ರೇಮದ ಫಲಶ್ರುತಿಯೇ ಶಂಕರಾರ್ಧ ಶರೀರಿಣಿ.
ನಿತೇಶದ ಮಾರ್ನಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

Advertise in articles 1

advertising articles 2

Advertise under the article