ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಮೇಲೆ ಹೂ ಸುರಿಸಿದ ಬಾಬರಿ ಮಸೀದಿ ಹೋರಾಟಗಾರ ಅನ್ಸಾರಿ
ಅಯೋಧ್ಯೆ: ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಅಚ್ಚರಿಯ ಘಟನೆಯೊಂದು ನಡೆಯಿತು. ಶತಮಾನಗಳ ಅಯೋಧ್ಯೆ ಭೂ ವಿವಾದ ಪ್ರಕರಣದ ಅಪೀಲುದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರು ರೋಡ್ ಶೋ ವೇಳೆ ರಸ್ತೆ ಪಕ್ಕದಲ್ಲಿ ನಿಂತು ಪ್ರಧಾನಿಯ ಮೇಲೆ ಹೂ ಮಳೆಯನ್ನು ಸುರಿಸಿದ್ದಾರೆ.
ಅಯೋಧ್ಯೆ ನಗರದಲ್ಲಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಜನರು ಇಕ್ಕೆಲಗಳಲ್ಲಿ ನಿಂತುಕೊಂಡು ಪುಷ್ಪವೃಷ್ಟಿ ಮೂಲಕ ಭವ್ಯ ಸ್ವಾಗತವನ್ನು ಕೋರಿದರು. ಈ ವೇಳೆ ಇಕ್ಬಾಲ್ ಅನ್ಸಾರಿ ಅವರೂ ಕೂಡ ಕೈಯಲ್ಲಿ ಕೂವಿನ ದಳಗಳನ್ನು ಹಿಡಿದು ನಿಂತಿದ್ದುದು ಕಂಡುಬಂತು. ಮೋದಿ ಅವರಿದ್ದ ಕಾರು ಸಾಗುತ್ತಿದ್ದಾಗ ಇಕ್ಬಾಲ್ ಅವರು ಪುಷ್ಪವೃಷ್ಟಿ ಮಾಡಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅವರು, "ಅಯೋಧ್ಯೆಯು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಮಹತ್ವದ ಸ್ಥಳವಾಗಿದೆ. ಎಲ್ಲ ಜನಾಂಗದವರು ಇಲ್ಲಿ ಒಟ್ಟಾಗಿ ಬಾಳ್ವೆ ಮಾಡುತ್ತಿದ್ದೇವೆ. ನಗರದಲ್ಲಿ ಕಣ್ಣು ಕುಕ್ಕುವಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಲ್ಲಿಗೆ ಬಂದ ಪ್ರಧಾನಿಯನ್ನು ಸ್ವಾಗತಿಸುವುದು ನಮ್ಮ ಅದೃಷ್ಟ. ಅವರೇ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು" ಎಂದು ತಿಳಿಸಿದರು.
ಬಾಬರಿ ಮಸೀದಿ ಪರ ಹೋರಾಡಿದ್ದ ಇಕ್ಬಾಲ್, ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ. "ಮಂದಿರ-ಮಸೀದಿ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನ ಕೈಗೊಂಡಿದೆ. ಇದೀಗ ಭವ್ಯ ಮಂದಿರ ಸಿದ್ಧವಾಗಿದೆ. ಪ್ರಾಣ ಪ್ರತಿಷ್ಠಾಪನೆಯ ದಿನ ಭಾಗಿಯಾಗಿ, ಪ್ರಧಾನಿ ಮೋದಿ ಅವರಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಯಸುತ್ತೇವೆ" ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮೋದಿ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ, ನವೀಕರಿಸಲಾದ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಇದರ ಜೊತೆಗೆ, 15,700 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ಅಪೀಲುದಾರ ಇಕ್ಬಾಲ್ ಅನ್ಸಾರಿ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ನಡೆದ ಭೂಮಿಪೂಜೆಗೆ ಆಹ್ವಾನಿಸಲಾಗಿತ್ತು. ಅಯೋಧ್ಯೆಯಿಂದ ಆಹ್ವಾನಿತರಾದ ಮೊದಲ ವ್ಯಕ್ತಿ ಇವರಾಗಿದ್ದರು. ಶ್ರೀರಾಮನ ಇಚ್ಛೆಯಂತೆ ನಾನು ಮೊದಲ ಆಮಂತ್ರಣ ಪತ್ರಿಕೆ ಪಡೆದುಕೊಂಡಿದ್ದೇನೆ. ಇದು ಮತ್ತಷ್ಟು ಸಂತಸ ಮೂಡಿಸಿದೆ ಎಂದು ಅನ್ಸಾರಿ ಹೇಳಿದ್ದರು. ಅಯೋಧ್ಯೆ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 1949ರಲ್ಲಿ ಕೇಸು ಹಾಕಿದ್ದ ಹಶೀಂ ಅನ್ಸಾರಿ ಮಗನಾಗಿರುವ ಇಕ್ಬಾಲ್ ಅನ್ಸಾರಿ ತಮ್ಮ ತಂದೆ ತೀರಿಕೊಂಡ ಬಳಿಕ ಬಾಬ್ರಿ ಮಸೀದಿ ವಿಚಾರವಾಗಿ ಕಾನೂನು ಹೋರಾಟ ನಡೆಸಿದ್ದರು.
Babri petitioner Iqbal Ansari throws flowers on PM Narendra Modi to welcome in Ayodhya. pic.twitter.com/2ozZPNenlD
— News Arena India (@NewsArenaIndia) December 30, 2023