ಬೆಳ್ತಂಗಡಿಯಲ್ಲಿ ಕರಿಮಣಿ ಸರ ಕಳ್ಳತನ- ಇಬ್ಬರು ಮಹಿಳೆಯರ ಸೆರೆ
Thursday, December 21, 2023
ಬೆಳ್ತಂಗಡಿ: ಮಹಿಳೆಯೊಬ್ಬರು ಸರಕಾರಿ ಬಸ್‌ಗೆ ಹತ್ತುವಾಗ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣವನ್ನು ಬೇಧಿಸಿದ ಬೆಳ್ತಂಗಡಿ ಪೊಲೀಸರು ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ತಿರುರ್ಪು ಜಿಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30) ಬಂಧಿತ ಆರೋಪಿಗಳು, ಸರಕಾರಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬರು ಡಿ.12ರಂದು ಬೆಳ್ತಂಗಡಿಯಲ್ಲಿ ಸರಕಾರಿ ಬಸ್‌ಗೆ ಹತ್ತುವ ವೇಳೆ 24 ಗ್ರಾಂ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮತ್ತು ತಂಡ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್
ನಿಲ್ದಾಣದಿಂದ ಬುಧವಾರ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ಹಲವು ಕಡೆ ಕಳ್ಳತನ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.