ಅಮೇರಿಕಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಕೂಡಿಹಾಕಿ ಥಳಿತ - ಚಿತ್ರಹಿಂಸೆ ನೀಡಿ ಮನೆಕೆಲಸ ಮಾಡಿಸುತ್ತಿದ್ದ ಮೂವರು ಭಾರತೀಯರ ಅರೆಸ್ಟ್
Saturday, December 2, 2023
ವಾಷಿಂಗ್ಟನ್ : ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಹಲವು ತಿಂಗಳವರೆಗೆ ಮನೆಯ ಕೆಳ ಅಂತಸ್ತಿನಲ್ಲಿ ಕೂಡಿಹಾಕಿ, ಹಲ್ಲೆಗೈದು ನೆರೆಹೊರೆಯ ಮೂವರು ಭಾರತೀಯರ ಮನೆಗೆಲಸಕ್ಕೆ ಬಲವಂತಗೊಳಿಸಿರುವ ಅಮಾನವೀಯ ಪ್ರಕರಣ ಅಮೆರಿಕದ ಮಿಸೌರಿಯ ಸೈಂಟ್ ಚಾರ್ಲ್ಸ್ ಕೌಂಟಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯರನ್ನು ಬಂಧಿಸಲಾಗಿದೆ.
ಇದು ಮಾನವ ಕಳ್ಳಸಾಗಣೆ ಪ್ರಕರಣವೆಂದು ಶಂಕಿಸಿರುವ ಪೊಲೀಸರು ಆರೋಪಿಗಳಾದ ವೆಂಕಟೇಶ್ ಆರ್. ಸಟ್ಟಾರು, ಶ್ರವಣ್ ವರ್ಮ ಪೆನುಮೆಚ್ಚ ಮತ್ತು ಹಾಗೂ ನಿಕಿಲ್ ಪೆನ್ಮಾಕ್ಷ ಎಂಬವರನ್ನು ಬಂಧಿಸಿದ್ದಾರೆ.
20 ವರ್ಷದ ಈ ಭಾರತೀಯ ವಿದ್ಯಾರ್ಥಿಯನ್ನು ಅಪಹರಣ ಮಾಡಿರುವ ನೆರೆಹೊರೆಯ ನಿವಾಸಿಗಳಾದ ಈ ಮೂವರು ಆತನನ್ನು ಮನೆಯ ಕೆಳ ಅಂತಸ್ತಿನಲ್ಲಿ ಕೂಡಿಹಾಕಿದ್ದಾರೆ. ಜೊತೆಗೆ ಆತನಿಂದ ಮೂರೂ ಮನೆಯ ಕೆಲಸವನ್ನು ಮಾಡಿಸುತ್ತಿದ್ದರು. ಅಲ್ಲದೆ ಆತನಿಗೆ ನಿರಂತರವಾಗಿ ಥಳಿಸುತ್ತಿದ್ದರು. ವಿದ್ಯಾರ್ಥಿಯ ಈ ದಯನೀಯ ಪರಿಸ್ಥಿತಿಯನ್ನು ಅರಿತ ಸ್ಥಳೀಯರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ದಾಳಿ ನಡೆಸಿ ಮೂವರೂ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಯ ಮೂಳೆ ಮುರಿದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೊಂದು ಅತ್ಯಂತ ಅಮಾನವೀಯ ಪ್ರಕರಣವಾಗಿದ್ದು ಆರೋಪಿಗಳು ಭಾರತದಿಂದ ಹಲವರನ್ನು ಅಕ್ರಮವಾಗಿ ಅಮೆರಿಕಕ್ಕೆ ಕರೆತಂದು ಬಲವಂತದ ದುಡಿಸುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.