ಮಂಗಳೂರು: ವಾಹನ ಕಳವು ಪ್ರಕರಣದ ಆರೋಪಿಗಳಿಬ್ಬರು ಅರೆಸ್ಟ್
Tuesday, December 19, 2023
ಮಂಗಳೂರು: ನಗರದ ಉತ್ತರ ದಕ್ಕೆಯ ಬಳಿಯ ಪಾರ್ಕಿಂಗ್ ಏರಿಯಾದಲ್ಲಿ ಪಾರ್ಕ್ ಮಾಡಲಾಗಿದ್ದ ಆ್ಯಕ್ಟಿವಾ ಸ್ಕೂಟರ್ ಅನ್ನು ಕಳವುಗೈದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಸಬಾ ಬೇಂಗ್ರೆ, ನ್ಯೂ ಬದ್ರಿಯಾ ಮಸೀದಿ ಬಳಿ ನಿವಾಸಿ ಮೊಹಮ್ಮದ್ ಆಸಿಫ್(32), ಕಸಬಾ ಬೆಂಗ್ರೆ ಪರೋಟ ಪಾಯಿಂಟ್ ಹಿಂದುಗಡೆ ನಿವಾಸಿ ಮಹಮ್ಮದ್ ಸಜ್ವಾನ್ (21) ಬಂಧಿತ ಆರೋಪಿಗಳು.
ವಾಹನ ಕಳವು ಆಗಿರುವ ಬಗ್ಗೆ ಮಹಮ್ಮದ್ ಸಿನಾನ್ ಎಂಬವರು ನೀಡಿರುವ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಮೊಹಮ್ಮದ್ ಆಸಿಫ್ ಮತ್ತು ಮಹಮ್ಮದ್ ಸಜ್ವಾನ್ ಎಂಬಿಬ್ಬರನ್ನು ಬಂಧಿಸಿದ್ದಾರೆ.
ತನಿಖೆ ನಡೆಸಿದ ವೇಳೆ ಆರೋಪಿಗಳ ಇನ್ನಷ್ಟು ಕಳವು ಕೃತ್ಯಗಳು ಬಯಲಿಗೆ ಬಂದಿದೆ. ಆರೋಪಿಗಳಿಂದ ಪಡುಬಿದ್ರೆ ನಗರ ಗ್ರಾಮ ಸೇವಾ ಕೇಂದ್ರದಿಂದ ಕಳವು ಮಾಡಿರುವ 2 ಲ್ಯಾಪ್ ಟಾಪ್ ಹಾಗೂ ಉತ್ತರ ದಕ್ಕೆಯ ಪಾರ್ಕಿಂಗ್ ಸ್ಥಳದಿಂದ ಕಳವು ಮಾಡಿದ ಆ್ಯಕ್ಟಿವಾ ಸ್ಕೂಟರ್ ಮತ್ತು ಮಂಕಿ ಸ್ಯಾಂಡ್ ಬಳಿ ಕಳವು ಮಾಡಿದ ಡಿಯೋ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,20,000 ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.