ಮಂಗಳೂರು: ಎಂಆರ್ ಪಿಎಲ್ ನಿಂದ ವೈಮಾನಿಕ ಇಂಧನ ಹೇರಿಕೊಂಡು ಹೊರಟಿದ್ದ ಹಡಗಿಗೆ ಯಮನ್ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ
Friday, December 15, 2023
ಮಂಗಳೂರು: ನಗರದ ಎಂಆರ್ ಪಿಎಲ್ ನ ವೈಮಾನಿಕ ಇಂಧನವನ್ನು ಹೇರಿಕೊಂಡು ಮಂಗಳೂರಿನಿಂದ ಹೊರಟಿದ್ದ ಹಡಗಿನ ಮೇಲೆ ಯೆಮೆನ್ ದೇಶದ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ನೆದರ್ಲೆಂಡ್ ಅಥವಾ ಸ್ವೀಡನ್ ಕಡೆಗೆ ತೆರಳುತ್ತಿದ್ದ ತೈಲ ಟ್ಯಾಂಕರುಗಳಿದ್ದ ಹಡಗಿನ ಮೇಲೆ ಯೆಮೆನ್ ಸಮೀಪ ಕ್ಷಿಪಣಿ ದಾಳಿ ನಡೆದಿದೆ.
ಡಿ.11ರಂದು ಈ ಘಟನೆ ಸಂಭವಿಸಿದೆ. ಹಡಗಿಗೆ ಡಿ. 6ರಂದು ಮಂಗಳೂರಿನಲ್ಲಿ ತೈಲ ಹೇರಲಾಗಿತ್ತು. ಆದರೆ ಹೌತಿ ಬಂಡುಕೋರರ ಗುರಿ ತಪ್ಪಿದ ಹಿನ್ನೆಲೆಯಲ್ಲಿ ಹಡಗಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಹಡಗಿನಲ್ಲಿ ಶಸ್ತ್ರ ಸಜ್ಜಿತ ಸಿಬಂದಿಯಿದ್ದು ಮರು ದಾಳಿ ನಡೆಸಿದ್ದಾರೆ ಎಂದು ಹಡಗಿನ ಕಂಪೆನಿ ತಿಳಿಸಿದೆ.
ಯೆಮೆನ್ ದೇಶದ ಹೌತಿ ಬಂಡುಕೋರರ ಅಧೀನದಲ್ಲಿರುವ ಬಾಬ್ ಎಲ್-ಮಂಡೆಬ್ ಕರಾವಳಿ ಭಾಗದಿಂದ ಕ್ಷಿಪಣಿ ದಾಳಿ ನಡೆದಿದೆ. ಸುಯೆಜ್ ಕಾಲುವೆ ಮೂಲಕ ಐರೋಪ್ಯ ದೇಶಗಳತ್ತ ಸಾಗುವ ತೈಲ ಟ್ಯಾಂಕರ್ ಹೊಂದಿರುವ ಹಡಗಿನ ಮೇಲೆ ಮೊದಲ ಬಾರಿಗೆ ಇಂತಹ ದಾಳಿ ನಡೆದಿದೆ. ಹೌತಿ ಬಂಡುಕೋರರಿಗೆ ಸೇರಿದ ಡ್ರೋಣ್ ಅನ್ನು ಅಮೆರಿಕದ ಮಿಲಿಟರಿ ಪಡೆ ಹೊಡೆದುರುಳಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಹಡಗು ಆರ್ಡ್ ಮೋರ್ ಶಿಪ್ಪಿಂಗ್ ಕಾರ್ಪೊರೇಶನ್ ಎಂಬ ಕಂಪನಿಗೆ ಸೇರಿದ್ದಾಗಿದೆ. ಜೆಟ್ ಇಂಧನವು ಶೆಲ್ ಮತ್ತು ಭಾರತದ ಒಎನ್ ಜಿಸಿ ಜಂಟಿ ಸಹಭಾಗಿತ್ವದ ಕಂಪನಿಗೆ ಸೇರಿದ್ದು ಐರೋಪ್ಯ ದೇಶಗಳಿಗೆ ಪೂರೈಸುವ ದೃಷ್ಟಿಯಿಂದ ಸಾಗಿಸುತ್ತಿದ್ದರು. ಒಂದೆಡೆ ಇಸ್ರೇಲ್ ವಿರುದ್ಧ ಹೌತಿ ಬಂಡುಕೋರರು ದಾಳಿ ಬೆದರಿಕೆ ಹಾಕಿರುವಾಗಲೇ ಕ್ಷಿಪಣಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ.