ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರ - ಬೈಕ್ ಸಹಿತ ಹೊಂಡಕ್ಕೆ ಬಿದ್ದ ಸವಾರ
Monday, December 25, 2023
ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರ ಅಷ್ಟಿಷ್ಟಲ್ಲ. ಇದೀಗ ಬೈಕ್ ಸಹಿತ ಸವಾರರೊಬ್ಬರು ನೀರು ತುಂಬಿದ ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಭೂಗತ ಕೇಬಲ್ ಹಾಗೂ ಪೈಪ್ ಲೈನ್ ಕಾಮಗಾರಿಗಾಗಿ ಹೊಂಡ ತೆಗೆಯಲಾಗಿತ್ತು. ಆದರೆ ಕಾಮಗಾರಿ ನಡೆದ ಬಳಿಕ ಹೊಂಡ ಮುಚ್ಚದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ನಿನ್ನೆ ರಾತ್ರಿ ನೀರು ತುಂಬಿದ್ದ ಹೊಂಡಕ್ಕೆ ಬೈಕ್ ಸವಾರರೊಬ್ಬರು ಬೈಕ್ ಸಹಿತ ಬಿದ್ದಿದ್ದಾರೆ.
ಬೈಕ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಸವಾರ ಮೇಲೆ ಬರಲಾಗದೆ ಪರದಾಟ ನಡೆಸಿದ್ದರು. ಬಳಿಕ ಸ್ಥಳೀಯರು ಸೇರಿ ಬೈಕ್ ಸವಾರ ಯುವಕನನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಜನನಿಬಿಡ ರಸ್ತೆಯಲ್ಲೇ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡೇ ಹೊಂಡ ತೆಗೆಯಲಾಗಿತ್ತು. ಆದರೆ ಹೊಂಡಕ್ಕೆ ತಡೆಬೇಲಿಯನ್ನು ನಿರ್ಮಿಸದೆ ಬೇಜವಾಬ್ದಾರಿ ಮೆರೆದ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.