ಮುಸ್ಲಿಂ ಯುವತಿಯನ್ನು ವಿವಾಹವಾಗಲು ಮತಾಂತರಗೊಂಡ ತಹಶೀಲ್ದಾರ್ ಸೇವೆಯಿಂದಲೇ ವಜಾ
Friday, December 29, 2023
ಲಕ್ನೋ: ಮುಸ್ಲಿಂ ಯುವತಿಯನ್ನು ವಿವಾಹವಾಗಲು ಮತಾಂತರವಾಗಿರುವ ಆರೋಪ ಎದುರಿಸುತ್ತಿರುವ ತಹಶೀಲ್ದಾರ್ ಹುದ್ದೆಯಲ್ಲಿದ್ದ ಆಶಿಷ್ ಗುಪ್ತಾ ಎಂಬಾತನನ್ನು ಉತ್ತರಪ್ರದೇಶ ಸರಕಾರ ಸರ್ಕಾರಿ ಸೇವೆಯಿಂದ ವಜಾ ಮಾಡಿದೆ.
ಉತ್ತರಪ್ರದೇಶದ ಮೌಧಾ ಜಿಲ್ಲೆಯಲ್ಲಿ ತಹಶೀಲ್ದಾರ್ ಆಗಿದ್ದ ಆಶಿಷ್ ಗುಪ್ತಾ ಎಂಬಾತ ಮುಸ್ಲಿಂ ಯುವತಿಯನ್ನು ಮದುವೆಯಾಗಲು ತನ್ನ ಧರ್ಮವನ್ನೇ ಬದಲಿಸಿದ್ದಾನೆ. ಮುಸ್ಲಿಂ ಆಗಿ ಮತಾಂತರಗೊಂಡು ತನ್ನ ಹೆಸರನ್ನು ಮೊಹಮ್ಮದ್ ಯೂಸುಫ್ ಎಂದು ಬದಲಿಸಿಕೊಂಡಿದ್ದಾನೆ. ಆದ್ದರಿಂದ ಸರ್ಕಾರಿ ಸೇವೆಯಲ್ಲಿದ್ದು ಸೇವಾ ನಿಮಯಗಳನ್ನು ಉಲ್ಲಂಘಿಸಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದ್ದರಿಂದ ಮೌಧಾ ಜಿಲ್ಲೆಯ ಜಿಲ್ಲಾಧಿಕಾರಿ ಅರುಣ್ ಮಿಶ್ರಾ ಅವರು ಆಶಿಷ್ ಗುಪ್ತಾನನ್ನು ತಹಶೀಲ್ದಾರ್ ಹುದ್ದೆಯಿಂದ ವಜಾಗೊಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ತಹಶೀಲ್ದಾರ್ ಆಶಿಷ್ ಗುಪ್ತಾ ಬಗ್ಗೆ ಆರೋಪ ಕೇಳಿಬಂದಿತ್ತು. ಮೊಹಮ್ಮದ್ ಯೂಸುಫ್ ಹೆಸರಲ್ಲಿ ಈತ ಅಲ್ಲಿನ ಮಸೀದಿಗೆ ತೆರಳುತ್ತಿದ್ದುದನ್ನು ಅಲ್ಲಿನವರು ವಿರೋಧಿಸಿದ್ದರು. ಮುಸ್ಲಿಂನಲ್ಲದ ವ್ಯಕ್ತಿ ಮಸೀದಿಗೆ ಬಂದು ಪ್ರಾರ್ಥನೆ ಮಾಡುತ್ತಿದ್ದಾನೆಂದು ಮಸೀದಿ ಸದಸ್ಯ ಮೊಹಮ್ಮದ್ ಆಶಿಕ್, ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆಯೇ ಆಶಿಷ್ ಗುಪ್ತಾನ ಅಸಲಿ ಪತ್ನಿ ಆರತಿ ಪೊಲೀಸ್ ದೂರು ನೀಡಿದ್ದು ತನ್ನ ಪತಿ ಮತಾಂತರಗೊಂಡ ಬಗ್ಗೆ ಆರೋಪಿಸಿದ್ದಾಳೆ. ಅಲ್ಲದೆ, ತನ್ನ ಪತಿಗೆ ಮುಸ್ಲಿಂ ಮಹಿಳೆಯರೊಂದಿಗೆ ಸಂಬಂಧ ಇದೆ. ತನ್ನ ಪತಿಯನ್ನು ಬಲವಂತದಿಂದ ಮತಾಂತರ ಮಾಡಿದ್ದಾರೆಂದು ದೂರು ನೀಡಿದ್ದಳು.
ಅಲ್ಲದೆ, ಇತರ ಮೂವರು ಆರೋಪಿಗಳ ಬಗ್ಗೆಯೂ ಆರತಿ ದೂರಿನಲ್ಲಿ ಹೇಳಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಷ್ ಗುಪ್ತಾನ ಜೊತೆಗೆ ಸಂಪರ್ಕ ಹೊಂದಿದ್ದ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆಯುವುದಕ್ಕಾಗಿ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದಾರೆ.