ರಾಜ್ಯದಲ್ಲಿ ಕೋವಿಡ್ ಗೆ ಓರ್ವ ಬಲಿ: ಜನಜಂಗುಳಿ ಇರುವಲ್ಲಿ ಮಾಸ್ಕ್ ಹಾಕಿಕೊಳ್ಳಿ - ಕ್ರಿಸ್ಮಸ್, ನ್ಯೂಈಯರ್ ಆಚರಣೆಗೆ ನಿರ್ಬಂಧವಿಲ್ಲ
Wednesday, December 20, 2023
ಬೆಂಗಳೂರು: ಕೇರಳದಲ್ಲಿ ಕಾಣಿಸಿಕೊಂಡ ಕೋವಿಡ್ ಸೋಂಕು ರಾಜ್ಯಕ್ಕೂ ಕಾಲಿಟ್ಟಿದ್ದು, ಓರ್ವ ಬಲಿಯಾಗಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಜನರು ತಮ್ಮ ದೈನಂದಿನ ಕೆಲಸ ಕಾರ್ಯ ಮಾಡುವುದಕ್ಕೇನು ತೊಂದರೆ ಇಲ್ಲ. ಆದರೆ ಜನಜಂಗುಳಿ ಹೆಚ್ಚಿರುವಲ್ಲಿ ಮಾಸ್ಕ್ ಹಾಕಿದರೆ ಉತ್ತಮ ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಸಚಿವರು ರೂಪಾಂತರಿ ಕೋವಿಡ್ ನಿಂದ ಕೇರಳದಲ್ಲಿ ಐವರು ಸಾವು ಸಂಭವಿದೊದೆ. ಹೃದಯ ಸಂಬಂಧಿ, ಕ್ಯಾನ್ಸರ್ ಸಮಸ್ಯೆ ಜೊತೆಗೆ ಕೋವಿಡ್ ಬಂದ ಹಿನ್ನಲೆಯಲ್ಲಿ ಸಾವು ಆಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಒಂದು ಬಲಿಯಾಗಿದೆ. ಕೇಂದ್ರ ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ರಾಜ್ಯದ ಆರೋಗ್ಯ ಅಧಿಕಾರಿಗಳು ಭಾಗಿಯಾಗಿದ್ದರು. ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪರಿಸ್ಥಿತಿ ಮಾಹಿತಿ ಬಗ್ಗೆ ನೀಡಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ವೆಂಟಿಲೇಟರ್ ನಿರ್ವಹಣೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಐಸಿಎಂಆರ್ ಫೋರ್ಟಲ್ ಡೇಟಾ ಮಾಹಿತಿ ಸಿಗುತ್ತಿಲ್ಲ. ಪೋರ್ಟಲ್ ಸರಿಪಡಿಸಲು ಮನವಿ ಮಾಡಿದ್ದೇವೆ.
ಜೆಎನ್ 1 ರೂಪಾಂತರಿ ಕೋವಿಡ್ ಸೋಂಕು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಅಮೆರಿಕಾ, ಯೂರೋಪ್ ರಾಷ್ಟ್ರಗಳಲ್ಲಿ ಅಧಿಕವಾಗಿ ಕಾಣಿಸಿಕೊಂಡಿದೆ. ಇದು ಬಹಳ ವೇಗವಾಗಿ ಹರಡುವ ವೈರಾಣು ಆಗಿದ್ದು, ಆರ್ ಟಿ ಪಿ ಸಿ ಆರ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಕಡ್ಡಾಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ಹಾಕಲು ಸೂಚನೆ ನೀಡಲಾಗಿದೆ. ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ತೊಂದರೆ ಇಲ್ಲ. ಆದ್ರೆ ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ಮಾಸ್ಕ್ ಹಾಕಿದರೆ ಉತ್ತಮ ಎಂದು ಸಚಿವರು ನುಡಿದರು.
ಡಿಸೆಂಬರ್ 21ರ ಗುರುವಾರ ಸಿಎಂ ಸಿದ್ದರಾಮಯ್ಯರೊಂದಿಗೆ ಸಭೆ ನಡೆಸಲಾಗುತ್ತದೆ. ಅದರಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಕ್ರಿಸ್ಮಸ್ ಹಾಗೂ ನ್ಯೂಇಯರ್ ಸೆಲೆಬ್ರೇಷನ್‌ಗೆ ಸದ್ಯಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ. ಮುಂದಿನ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.