ಮಂಗಳೂರು: ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು
Tuesday, December 12, 2023
ಮಂಗಳೂರು: ಯುವಕನೋರ್ವನು ನಗರದ ಮಂಗಳಾ ಈಜುಕೊಳದಲ್ಲಿ ಈಜಾಡುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ.
ಹರಿಯಾಣ ರಾಜ್ಯದ ಗುರುಗಾಂವ್ ನ ಅಭಿಷೇಕ್ ಆನಂದ್ (30) ಮೃತಪಟ್ಟ ಯುವಕ.
ಮಂಗಳಾ ಈಜುಕೊಳದಲ್ಲಿ ಸಂಜೆ 4.45ರಿಂದ 5.30ರ ವರೆಗೆ ಸಾರ್ವಜನಿಕರಿಗೆ ಈಜಲು ಪ್ರವೇಶಾವಕಾಶವಿದೆ. 4.30ರ ವೇಳೆ ಅಭಿಷೇಕ್ ಆನಂದ್ ಈಜಲೆಂದು ಬಂದು ಟಿಕೆಟ್ ಪಡೆದುಕೊಂಡಿದ್ದಾನೆ. ಆದರೆ 4.45ರ ವೇಳೆ ಈಜುಕೊಳಕ್ಕೆ ಇಳಿದಿದ್ದು, 5.05ರ ಸುಮಾರಿಗೆ ಏಕಾಏಕಿ ನೀರಲ್ಲಿ ಮುಳುಗಿದ್ದಾನೆ. ಈ ಸಂದರ್ಭ ಸುಮಾರು 30ಕ್ಕೂ ಅಧಿಕ ಮಂದಿ ಈಜಾಡುತ್ತಿದ್ದರು. ಆದರೆ ಆತ ಮುಳುಗಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ಬಾಲಕನೊಬ್ಬ ಈಜಾಡುತ್ತಾ ಹೋಗುತ್ತಿದ್ದಾಗ ನೀರಿನಡಿಯಲ್ಲಿ ದೇಹವೊಂದು ಕಂಡು ಬಂದಿದೆ. ತಕ್ಷಣ ಆತ ಲೈಫ್ ಗಾರ್ಡ್‌ಗಳಿಗೆ ಮಾಹಿತಿ ನೀಡಿದ್ದಾನೆ. ಈ ಸಂದರ್ಭ ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ಲೈಫ್ ಗಾರ್ಡ್‌ಗಳು ಈಜುಕೊಳಕ್ಕೆ ಹಾರಿ ಆತನನ್ನು ಮೇಲಕ್ಕೆ ತಂದಿದ್ದಾರೆ.
ಈಜಾಡಲು ಬಂದಿದ್ದ ಡಾ.ನರೇಂದ್ರ ನಾಯಕ್ ಮತ್ತು ಲೈಫ್ ಗಾರ್ಡ್ ಗಳು ರಾಜೇಂದ್ರ ಅವರು ಅಭಿಷೇಕ್ ಆನಂದ್ ಅವರ ಎದೆಯನ್ನು ಪಂಪಿಂಗ್ ಮಾಡಿದ್ದಲ್ಲದೆ, ಬಾಯಿ ಮೂಲಕ ಕೃತಕ ಉಸಿರಾಟ ನೀಡಿದ್ದಾರೆ. ಆದರೆ ನೀರಲ್ಲಿ ಮುಳುಗಿದ ಯುವಕನಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ತಕ್ಷಣ ಆತನನ್ನು ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಬರ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈಜುಕೊಳಕ್ಕೆ ಯುವಕ ಬಂದಿರುವುದು, ಈಜುಕೊಳಕ್ಕೆ ಇಳಿದು ಈಜಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಜುಕೊಳವನ್ನೇ ಕೇಂದ್ರೀಕರಿಸಿ 10ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳಿದ್ದು, ಪೊಲೀಸರು ಸಿಸಿಟಿವಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.