ಕಾಡುಗಳ್ಳ ವೀರಪ್ಪನ್ ಸಹಚರ, ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಜ್ಞಾನಪ್ರಕಾಶ್ ಸಾವು
Saturday, December 16, 2023
ಹನೂರು: ಕಾಡುಗಳ್ಳ ವೀರಪ್ಪನ್ ಸಹಚರ ಹಾಗೂ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜ್ಞಾನಪ್ರಕಾಶ್, ಸಂದನಪಾಳ್ಯ ಗ್ರಾಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ.
ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿ ಜ್ಞಾನಪ್ರಕಾಶ್ (68) ಕಾಡುಗಳ್ಳ ವೀರಪ್ಪನ್ ಮುಖ್ಯ ಸಹಚರನಾಗಿದ್ದ. ಭಯಾನಕ ಎನಿಸುವ "ಪಾಲಾರ್ ಬಾಂಬ್ ಸ್ಫೋಟ" ಪ್ರಕರಣದಲ್ಲಿ ಮುಖ್ಯ ಆರೋಪಿಯೂ ಆಗಿದ್ದ. ಆದ್ದರಿಂದ ಜ್ಞಾನಪ್ರಕಾಶ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಈತನಿಗೆ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
29 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಜ್ಞಾನಪ್ರಕಾಶ್ ಗೆ ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್ ಬಾಧಿಸಿತ್ತು. ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿತ್ತು. ಆದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶ್ಶೂರಿಟಿ ಪಡೆದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮೇಲೆ ಬಿಡುಗಡೆಯಾದ ಜ್ಞಾನಪ್ರಕಾಶ್ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದನು. ಆದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಂದನಪಾಳ್ಯ ಗ್ರಾಮದ ಸ್ವಗೃಹದಲ್ಲಿ ನಿಧನ ಹೊಂದಿದ್ದಾನೆ.