ಕೋಟ್ಯಾಧಿಪತಿ ಉದ್ಯಮಿಯನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ ದಂಪತಿ ಹಾಗೂ ಗ್ಯಾಂಗ್ ಪೊಲೀಸ್ ಬಲೆಗೆ
Saturday, December 16, 2023
ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದ ದಂಪತಿ ಹಾಗೂ ತಂಡ ಪೊಲೀಸರ ಬಲೆಗೆ ಬಿದ್ದಿದೆ.
ಕಲೀಮ್ ಹಾಗೂ ಸಭಾ ದಂಪತಿ ಸೇರಿಕೊಂಡು ಉದ್ಯಮಿಯೊಬ್ಬರನ್ನು ತಮ್ಮ ಖೆಡ್ಡಾಕ್ಕೆ ಕೆಡವಿ ಹನಿಟ್ರಾಪ್ ಮಾಡಿದ್ದರು. ಎರಡು ತಿಂಗಳ ಹಿಂದೆ ಅಥಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಆತ ಕೆಲವು ದಿನಗಳ ಬಳಿಕ ಅಥಾವುಲ್ಲಾಗೆ ಕರೆ ಮಾಡಿ ಸಭಾಳನ್ನು ಪರಿಚಯಿಸಿದ್ದಾನೆ.
ಈ ವೇಳೆ ಕಲೀಮ್ ಪರಿಚಯಿಸುತ್ತಾ ಸಭಾಳನ್ನು ವಿಧವೆ ಎಂದು ಹೇಳಿ ಜೊತೆಯಲ್ಲಿರು ಎಂದು ಹೇಳಿದ್ದಾನೆ. ನವೆಂಬರ್14 ರಂದು ಅಥಾವುಲ್ಲಾಗೆ ಕರೆ ಮಾಡಿ ಸಭಾ, 'ಆರ್.ಆರ್. ನಗರದ ಬಳಿ ಬಾ.. ಬರುವಾಗ ಲಾಡ್ಜ್ ಬುಕ್ ಮಾಡಲು ಆಧಾರ್ ಕಾರ್ಡ್ ತರುವಂತೆ' ಹೇಳಿದ್ದಳು. ಅದರಂತೆ ಆತ ಬಂದು ಲಾಡ್ಜ್ ಬುಕ್ ಮಾಡಿದ್ದಾನೆ. ಪ್ಲಾನ್‌ನಂತೆ ಇತ್ತ ಸಭಾ ಹಾಗೂ ಅಥಾವುಲ್ಲಾ ಜೊತೆಯಲ್ಲಿದ್ದಾಗ ಸಭಾಳ ಪತಿಯ ಹನಿಟ್ರ್ಯಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು.
ಒಬೇದ್ ಖಾನ್ ಎಂಬಾತ ಈ ಇಬ್ಬರನ್ನು ತಡೆದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಕಲೀಮ್, ರಕೀಬ್, ಅತೀಕ್‌ನನ್ನು ಸ್ಥಳಕ್ಕೆ ಕರೆಸಿ ಧಮ್ಮಿ ಹಾಕಿದ್ದಾನೆ. ನಿಮ್ಮ ವಿಚಾರ ಮನೆಯವರಿಗೆ ತಿಳಿಸುವುದಾಗಿ ಹೆದರಿಸಿ ಅಥಾವುಲ್ಲಾ ಜೇಬಿನಲ್ಲಿದ್ದ 4,000 ರೂ. ಹಣವನ್ನು ಗ್ಯಾಂಗ್ ಕಸಿದಿತ್ತು. ಅಲ್ಲದೆ 6 ಲಕ್ಷ ರೂ. ಹಣ ತರುವಂತೆ ಧಮ್ಮಿ ಹಾಕಿತ್ತು.
ಈ ವೇಳೆ ಅಥಾವುಲ್ಲಾ ಅಲ್ಲಿಯೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಹೋಟೆಲ್‌ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹನಿಟ್ರ್ಯಾಪ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಸರಣಿ ಹನಿ ಟ್ಯಾಪಿಂಗ್ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.