ಮಂಗಳೂರು: 'ಸ್ತ್ರೀ ಆಸಕ್ತ' ಭಟ್ಟರ ಮುಸ್ಲಿಂ ಮಹಿಳೆಯರ ಅವಹೇಳಕಾರಿ ಹೇಳಿಕೆ ಬಿಜೆಪಿಯ ಟೂಲ್ ಕಿಟ್ - ಎಂ.ಜಿ.ಹೆಗಡೆ ಆರೋಪ
Thursday, December 28, 2023
ಮಂಗಳೂರು: ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಹೇಳಿರುವ ಹೇಳಿಕೆ ಬಿಜೆಪಿ ಹಾಗೂ ಸಂಘಪರಿವಾರದ ಟೂಲ್ ಕಿಟ್ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ದ.ಕ.ಜಿಲ್ಲಾ ಜಾತ್ಯಾತೀತ ಪಕ್ಷಗಳ ಸಂಘಟನೆಗಳ ಜಂಟಿ ವೇದಿಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆಯಷ್ಟಕ್ಕೆ ನಿಲ್ಲುವುದಿಲ್ಲ. ನಾಲ್ಕುವರೆ ವರ್ಷಗಳ ಕಾಲ ಮೌನದಲ್ಲಿದ್ದ ಅನಂತ ಕುಮಾರ್ ಹೆಗ್ಗಡೆ ಮೊನ್ನೆ ತಾನೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇನ್ನು ಮೂರು ತಿಂಗಳುಗಳ ಕಾಲ ಸಂಘಪರಿವಾರದ ಟೂಲ್ ಕಿಟ್ ಪ್ರೇರಿತ, ಯೋಜಿತ ಭಾಗವಾಗಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಈಶ್ವರಪ್ಪ ಮುಂತಾದವರು ಹೇಳಿಕೆ ಕೊಡುತ್ತಲೇ ಇರುತ್ತಾರೆ. ಆದ್ದರಿಂದ ಜನಸಾಮಾನ್ಯರು, ಹಿಂದೂ ಯುವಕರು, ಅಮಾಯಕ ಮುಸ್ಲಿಂ ಯುವಕರು ಇನ್ನು ಮುಂದೆ 24×7 ಜಾಗೃತರಾಗಿರಬೇಕು. ಇಲ್ಲದಿದ್ದಲ್ಲಿ ಹೊರಗೆ ಹೋದ ಯುವಕರು ಮನೆಗೆ ಬರಲಿಕ್ಕಿಲ್ಲ ಎಂದು ಹೇಳಿದರು.
ಬಿಜೆಪಿಯವರಿಗೆ ಚುನಾವಣೆ ಬರುವಾಗ ಅಮಾಯಕರ ಬಲಿಯಾಬೇಕು. ಇಲ್ಲದಿದ್ದಲ್ಲಿ ಇಷ್ಟು ದಿನಗಳ ಕಾಲ ಸುಮ್ಮನಿದ್ದ ಒಬ್ಬೊಬ್ಬರೇ ಏಕೆ ಕೋಮುದ್ವೇಷದ ಹೇಳಿಕೆ ಕೊಡಬೇಕು. ಆದ್ದರಿಂದ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈಗಲೇ ನಿಯಂತ್ರಣ ಮಾಡದಿದ್ದಲ್ಲಿ ತೊಂದರೆ ಖಂಡಿತಾ. ಭಟ್ಟರು ಒಂದು ಸಮುದಾಯದ ಮಹಿಳೆಯರನ್ನು ಪರ್ಯಾಯವಾಗಿ ವೇಶ್ಯೆಯರಿಗೆ ಹೋಲಿಸಿದ್ದಾರೆ. ಕಲ್ಲಡ್ಕ ಭಟ್ಟರ ಮನಸ್ಸಿನಲ್ಲಿ ಸ್ತ್ರೀ ಆಸಕ್ತಿಯೇ ತುಂಬಿಹೋಗಿದೆ. ಅವರು ಪದೇಪದೇ ವಿಕೃತವಾಗಿಯೇ ಮಾತನಾಡುವುದು. ಆದರೆ ಅದನ್ನು ಮತೀಯವಾಗಿ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಎಂ.ಜಿ.ಹೆಗಡೆಯವರು ಆಕ್ರೋಶ ವ್ಯಕ್ತಪಡಿಸಿದರು.