ಬಜ್ಪೆ: ನಡುರಾತ್ರಿ ಪುಟ್ಟ ಮಗುವಿನೊಂದಿಗೆ ತಾಯಿ ನಾಪತ್ತೆ
Friday, December 15, 2023
ಮಂಗಳೂರು: ಇಲ್ಲಿನ ಬಜ್ಪೆಯ ಕೆ.ಪಿ.ನಗರದಲ್ಲಿ ತಾಯಿ - ಮಗು ನಾಪತ್ತೆಯಾಗಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಪಿ.ನಗರದ ಶಾಹಿಸ್ತ ಮಂಝೀಲ್‌ನ ಅಹ್ಮದ್ ಮನ್ಸೂರ್ ಎಂಬವರ ಪತ್ನಿ ಶರೀನಾ ವೈ. (24) ಹಾಗೂ ಅವರ ಮೂರು ವರ್ಷದ ಪುತ್ರ ಮಹ್ಮದ್ ತೋಹಾರ್ ನಾಪತ್ತೆಯಾದವರು. ಡಿ.11ರಂದು ರಾತ್ರಿಯಿಂದ ಈ ತಾಯಿ - ಮಗು ನಾಪತ್ತೆಯಾಗಿದ್ದಾರೆ. ಅಹ್ಮದ್ ಮನ್ಸೂರ್ ಅವರು ತಾಯಿ ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದಾರೆ. 6 ವರ್ಷಗಳ ಹಿಂದೆ ಇವರಿಗೆ ಸುಳ್ಯದ ಶರಿನಾರೊಂದಿಗೆ ವಿವಾಹವಾಗಿತ್ತು. ಇವರಿಗೆ 3 ವರ್ಷದ ಗಂಡು ಮಗುವಿದ್ದು, ಶರೀನಾ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದಾರೆ.
ದಂಪತಿ ಅನ್ನೋನ್ಯವಾಗಿದ್ದು, ಡಿ. 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರೀನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮನೆ ಬಿಟ್ಟು ಹೋಗಿರುವುದು ದೃಢಪಟ್ಟಿದೆ.
ಶರೀನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದಾರೆ. ತನ್ನ ಮನೆಗೆ ಹೋಗುತ್ತಿರುವುದಾಗಿ ಅವರಯ ಬ್ಯಾರಿ ಭಾಷೆಯಲ್ಲಿ ಪತ್ರ ಬರೆದಿಟ್ಟು ಹೋಗಿದ್ದಾರೆ. ಆದರೆ ಅವರ ತಾಯಿ ಮನೆಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೆ ತಲುಪಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್ ಮನ್ಸೂರ್ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.