ಮಂಗಳೂರು: ಮಾಸ್ಟರ್ ಚೆಫ್ ಇಂಡಿಯಾ ರಿಯಾಲಿಟಿ ಶೋನ ವಿನ್ನರ್ ಆದ ಕುಡ್ಲದ ಯುವಕ - ಮೊಹಮ್ಮದ್ ಆಶಿಕ್ ಸಾಧನೆಗೆ ಮಂಗಳೂರಿಗರು ಫಿದಾ
Saturday, December 9, 2023
ಮಂಗಳೂರು: ಸೋನಿ ಟಿವಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪ್ರಖ್ಯಾತ ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾ ಶೋನಲ್ಲಿ ಮಂಗಳೂರಿನ 24 ವರ್ಷದ ಯುವಕ ಮೊಹಮ್ಮದ್ ಆಶಿಕ್ ಗೆದ್ದು ಕಿರೀಟ ತನ್ನದಾಗಿಸಿಕೊಂಡಿದ್ದಾರೆ.
ಅಕ್ಟೋಬರ್ 16ರಿಂದ ನಡೆಯುತ್ತಿದ್ದ ರಿಯಾಲಿಟಿ ಶೋನಲ್ಲಿ ಇಡೀ ದೇಶದ ವಿಭಿನ್ನ ಮಾದರಿಯ ದೇಸಿ ಅಡುಗೆಗಳ ಮಾದರಿಗಳನ್ನು ತೋರಿಸಬೇಕಿತ್ತು. ಇದು ನಿಜವಾಗಿಯೂ ಸ್ಪರ್ಧಾಲುಳಿಗೆ ಸವಾಲೆನಿಸುವ ಪಂದ್ಯಾಟವಾಗಿತ್ತು. ಜೊತೆಗೆ ನಿಗದಿತ ಸಮಯದೊಳಗೆ ಅಡುಗೆಯ ಮಾದರಿಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಯುವಕನೋರ್ವ ವಿನ್ನರ್ ಆಗಿ ಹೊರಹೊಮ್ಮಿದ್ದಾನೆ. ಈ ಮೂಲಕ ಮಂಗಳೂರಿನ ಮೊಹಮ್ಮದ್ ಆಶಿಕ್ ಅಪರೂಪದ ದಾಖಲೆಯನ್ನು ಸೃಷ್ಟಿಸಿ ಇಡೀ ದೇಶದ ಗಮನವನ್ನು ಸೆಳೆದಿದ್ದಾರೆ.
ಮೊಹಮ್ಮದ್ ಆಶಿಕ್ ಗೆ ಆರಂಭದಲ್ಲಿ ಹೊಟೇಲ್ ಮ್ಯಾನೇಜೆಂಟ್ ನಲ್ಲಿ ಗುರುತರ ಸಾಧನೆ ಮಾಡಲು ಹಣಕಾಸು ತೊಂದರೆ ಎದುರಾಗಿತ್ತು. ಆದರೆ ಅಷ್ಟಕ್ಕೇ ಹಿಮ್ಮೆಟ್ಟದ ಇವರು ತಮ್ಮದೇ ಆದ ವಿಶೇಷ ರೆಸಿಪಿಯುಳ್ಳ ಕುಲ್ಕಿ ಹಬ್ ಎನ್ನುವ ಜ್ಯೂಸ್ ಶಾಪ್ ಅನ್ನು ಮಂಗಳೂರಿನಲ್ಲಿ ಆರಂಭಿಸಿದ್ದರು. ಸೋನಿ ಟಿವಿಯಲ್ಲಿ ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋನಲ್ಲಿ ಮೊಹಮ್ಮದ್ ಆಶಿಕ್ ಸ್ಪರ್ಧಿಸಿದ್ದರೂ ಆದರೆ ಜಯದ ಹಾರವನ್ನು ಕೊರಳಿಗೆ ಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರುತರ ಸಾಧನೆ ಮಾಡಿದ್ದಲ್ಲದೆ, ಮಾಸ್ಟರ್ ಚೆಫ್ ಕಿರೀಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಮೊಹಮ್ಮದ್ ಆಶಿಕ್ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.