ಮಂಗಳೂರಿನಲ್ಲಿ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ- ಮೂವರ ಬಂಧನ
Saturday, December 23, 2023
ಮಂಗಳೂರು : ನಗರದಲ್ಲಿ ಕೇರಳದ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಈ ಪ್ರಕರಣದಲ್ಲಿ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಿವಾಸಿ ಸಂದೇಶ್ (28 ವರ್ಷ) ಪ್ರಶಾಂತ್ (31 ವರ್ಷ) ಮತ್ತು ರೋನಿತ್ (31 ವರ್ಷ) ಎಂಬವರನ್ನು ಬಂಧಿಸಲಾಗಿದೆ.
ಡಿಸೆಂಬರ್ 21 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಹಂಪನಕಟ್ಟೆಯ ಗುಡ್ ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ಸಂದೇಶ್ ಎಂಬಾತ ತಡೆದಿದ್ದಾನೆ. ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾ ಎಂದು ಪರಿಶೀಲಿಸುವ ನೆಪದಲ್ಲಿ ಅವರ ಮೇಲೆ ಕೂಗಿ ಐಡಿ ಕಾರ್ಡ್ ಕೇಳಿದ್ದಾನೆ.
ಈ ಸಂದರ್ಭದಲ್ಲಿ ಯುವಕ ಮತ್ತು ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾರೆ. ಆಗ ಆಟೋ ನಿಲ್ಲಿಸಲು ಯತ್ನಿಸಿದ ಸಂದೇಶ್ ಆಟೋ ಚಾಲಕನಿಗೂ ಗದರಿಸಿದ್ದಾನೆ. ಅಷ್ಟರಲ್ಲಿ ಬೇರೆಯವರು ಮಧ್ಯ ಪ್ರವೇಶಿಸಿದ್ದಾರೆ.
ಹುಡುಗ ಮತ್ತು ಹುಡುಗಿ ತಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಆಟೋ ಚಾಲಕ ಅಲ್ಲಿಗೆ ತಲುಪಿಸಿದ್ದಾರೆ. ಬಳಿಕ ಆಟೋ ಚಾಲಕನು ನೀಡಿದ ದೂರಿನ ಮೇರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.