ಮಂಗಳೂರು: ಮದ್ಯದ ಅಮಲಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಚಾಕುವಿನಿಂದ ಇರಿದು ಹತ್ಯೆ
Sunday, December 10, 2023
ಮಂಗಳೂರು: ಮದ್ಯದ ಅಮಲಿನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಗರದ ತಣ್ಣೀರುಬಾವಿಯ ಟೀ ಪಾರ್ಕ್ ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಕೇರಳದ ಕೊಲ್ಲಂ ನಿವಾಸಿ ಬಿನು( 41) ಕೊಲೆಯಾದ ದುರ್ದೈವಿ. ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ನಿವಾಸಿ ಜಾನ್ಸನ್ ಅಲಿಯಾಸ್ ಬಿನೋಯ್ (52) ಹತ್ಯೆ ಮಾಡಿದ ಆರೋಪಿ.
ಮೃತಪಟ್ಟ ಬಿನು ಹಾಗೂ ಜಾನ್ಸನ್ ಅಲಿಯಾಸ್ ಬಿನೋಯ್ ತಣ್ಣೀರುಬಾವಿಯ ಟೀ ಪಾರ್ಕ್ ಬಳಿಯ ದೋಣಿ ತಯಾರಿ ಮಾಡುವ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದರು. ಇವರಿಬ್ಬರು ಫ್ಯಾಕ್ಟರಿಯ ವಸತಿ ಸಮುಚ್ಛಯದ ಮನೆಯಲ್ಲಿ ವಾಸವಾಗಿದ್ದರು. ಆದರೆ ವೈಯಕ್ತಿಕ ವಿಚಾರದಲ್ಲಿ ಇಬ್ಬರ ಮಧ್ಯೆ ಶನಿವಾರ ರಾತ್ರಿ ಜಗಳ ನಡೆದಿತ್ತು. ಇದೇ ದ್ವೇಷದಿಂದ ಮದ್ಯ ಸೇವಿಸಿ ಬಂದಿದ್ದ ಬಿನು ಫ್ಯಾಕ್ಟರಿಯ ಮನೆಯಲ್ಲಿ ವಾಸವಾಗಿದ್ದ ಜಾನ್ಸನ್ ನನ್ನು ಇಂದು ಬೆಳಗ್ಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.