ಉಳ್ಳಾಲ: ಶಾಲೆಯ ಮುಂಭಾಗ ಬೀಯರ್ ಬಾಟಲಿ ಎಸೆದಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು- ಪ್ರಶ್ನಿಸಿದಾತನನ್ನೇ ಇರಿದು ಕೊಲೆಗೈದ ಆರೋಪಿಗಳು
Thursday, December 14, 2023
ಉಳ್ಳಾಲ: ನಡುರಾತ್ರಿ ಬಿಯರ್ ಕುಡಿದು ಬಾಟಲಿಯನ್ನು ಶಾಲೆ ಮುಂಭಾಗದ ರಸ್ತೆಗೆ ಎಸೆದವರನ್ನು ಪ್ರಶ್ನಿಸಿದ ಯುವಕನನ್ನು ಇರಿದು ಕೊಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ನಡೆದಿದೆ.
ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲಾ ಬಳಿಯ ನಿವಾಸಿ ವರುಣ್ ಗಟ್ಟಿ(28)ಕೊಲೆಯಾದ ಯುವಕ.
ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದ ಕಟ್ಟೆಯಲ್ಲಿ ಕುಳಿತು ಆರೋಪಿ ಸೂರಜ್ ಹಾಗೂ ರವಿರಾಜ್ ಎಂಬವರು ಬಿಯರ್ ಕುಡಿಯುತ್ತಿದ್ದರು. ಬಳಿಕ ಬಾಟಲಿಯನ್ನು ರಸ್ತೆಗೆ ಎಸೆದಿದ್ದರು ಎನ್ನಲಾಗಿದೆ. ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಅವರನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಅವರ ನಡುವೆ ವಾಗ್ವಾದ ನಡೆದು ತಳ್ಳಾಟವಾಗಿದೆ. ಆಗ ಸೂರಜ್ ಹರಿತವಾದ ಆಯುಧದಿಂದ ವರುಣ್ ಗಟ್ಟಿ ಬೆನ್ನಿಗೆ ಇರಿದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವರುಣ್ ಮನೆಯತ್ತ ನಡೆದು ಹೋಗಿದ್ದು ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರಣ್ ರಕ್ತ ಹರಿದಿದೆ.
ಇರಿದು ಕೊಲೆ ಮಾಡಿದ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕಾಲೊನಿ ನಿವಾಸಿಗಳಾಗಿದ್ದಾರೆ. ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದು ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ.
ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ಅವರ ವಾಹನದ ಚಾಲಕನಾಗಿದ್ದಾರೆ. ಮೃತಪಟ್ಟ ವರುಣ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.