ಮಟನ್ ಗಾಗಿ ಮುರಿದು ಬಿತ್ತು ಮದುವೆ!
ಹೈದರಾಬಾದ್: ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀಡಿದ ಮಾಂಸಾಹಾರ ಊಟದಲ್ಲಿ 'ನಲ್ಲಿ ಮೂಳೆ' ಇರಲಿಲ್ಲ ಎಂದು ವರನ ಕಡೆಯವರು ಸೃಷ್ಟಿಸಿದ ಗದ್ದಲಕ್ಕೆ ವಧುವಿನ ಕುಟುಂಬ ಮದುವೆ ಮುರಿದ ವಿಚಿತ್ರ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ.
ನಿಜಾಮಾಬಾದ್‌ನ ವಧು ಹಾಗೂ ಜಗ್ತಿಯಾಳ್‌ನ ವರನ ಕುಟುಂಬಸ್ಥರು ಪರಸ್ಪರ ಮಾತನಾಡಿ ಮದುವೆ ನಿಶ್ಚಯಿಸಿದ್ದರು. ನಿಜಾಮಾಬಾದ್‌ನ ವಧುವಿನ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಿಶ್ಚಿತಾರ್ಥ ಸಮಾರಂಭಕ್ಕೆ ಸೇರಿದ್ದ ಅತಿಥಿಗಳಿಗಾಗಿ ವಧುವಿನ ಕುಟುಂಬ ಮಾಂಸಾಹಾರದ ಊಟ ಸಿದ್ದಪಡಿಸಿತ್ತು.
ಆದರೆ, ಮಾಂಸದೂಟದಲ್ಲಿ ನಲ್ಲಿ ಮೂಳೆ ಬಡಿಸುತ್ತಿಲ್ಲ ಎಂದು ವರನ ಕಡೆಯವರು ತಗಾದೆ ತೆಗೆದಿದ್ದಾರೆ. “ಊಟದ ಪಟ್ಟಿಯಲ್ಲಿ ನಲ್ಲಿ ಮೂಳೆ ಇರಲಿಲ್ಲ,'' ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ವರನ ಕಡೆಯವರು ಜಗಳವಾಡಿದ್ದಾರೆ. ಸರಿಯಾಗಿ ಊಟೋಪಚಾರ ಮಾಡದೇ ನಮ್ಮನ್ನು ಅವಮಾನಿಸಲಾಗಿದೆ. ಉದ್ದೇಶಪೂರ್ವಕವಾಗಿ ನಲ್ಲಿ ಮೂಳೆ ಊಟ ನೀಡುತ್ತಿಲ್ಲ ಎಂದು ರಂಪಾಟ ಮಾಡಿದ್ದಾರೆ.
ಕೇವಲ ನಲ್ಲಿ ಮೂಳೆ ವಿಚಾರಕ್ಕೆ ಜಗಳ ಕಾಯುವ ಕುಟುಂಬದ ಮನೆಗೆ ಮಗಳನ್ನು ಕೊಡುವುದಿಲ್ಲ ಎಂದು ವಧುವಿನ ಕುಟುಂಬಸ್ಥರು ಮದುವೆ ಮುರಿದುಕೊಂಡಿದ್ದಾರೆ.