ನಕಲಿ ಕರೆನ್ಸಿ ಚಲಾವಣೆ, ಇನ್ಶುರೆನ್ಸ್ ಹೆಸರಲ್ಲಿ ವಂಚನೆ: ಇಬ್ಬರು ಪತ್ನಿಯರು, ಒಂಬತ್ತು ಮಕ್ಕಳು, ಆರು ಮಂದಿ ಪ್ರೇಯಸಿಯರನ್ನು ಮೈಂಟೈಂನ್ ಮಾಡ್ತಿದ್ದಾತ ಪೊಲೀಸ್ ಖೆಡ್ಡಾಕ್ಕೆ
Friday, December 1, 2023
ಲಕ್ನೋ: ಇಬ್ಬರು ಪತ್ನಿಯರು, ಒಂಬತ್ತು ಮಕ್ಕಳು ಹಾಗೂ ಆರು ಮಂದಿ ಪ್ರೇಯಸಿಯರನ್ನು ಹೊಂದಿದ್ದ ಹಲವರಿಗೆ ವಂಚನೆ ಮಾಡಿದ್ದ ವಂಚಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಜಿತ್ ಮೌರ್ಯ (41) ಎಂಬಾತ ಬಂಧಿತ ಆರೋಪಿ. ಈತ ನಕಲಿ ಕರೆನ್ಸಿ ನೋಟುಗಳ ಚಲಾವಣೆ ಮಾಡುವುದು, ವಿಮಾ ಯೋಜನೆಗಳೊಂದಿಗೆ ಜನರನ್ನು ವಂಚಿಸಿರುವುದು ಮತ್ತು ಹಲವಾರು ಇತರ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಲಾಗಿದೆ.
ಮೌರ್ಯ ತನ್ನ ಪತ್ನಿಯೊಂದಿಗೆ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದು, ಸರೋಜಿನಿ ನಗರ ಪೊಲೀಸರು ಬಂಧಿಸಿದ್ದಾರೆ. ನೂತನ ವರ್ಷಾಚರಣೆಗಾಗಿ ವಿದೇಶಿ ಪ್ರವಾಸಕ್ಕೆ ತೆರಳಲು ಯೋಜಿಸುತ್ತಿದ್ದ ಎಂದು ತಿಳಿದು ಬಂದಿದೆ. ಈತನಿಗೆ ಇಬ್ಬರು ಪತ್ನಿಯರು, ಒಂಬತ್ತು ಮಕ್ಕಳು ಮತ್ತು ಆರು ಮಂದಿ ಪ್ರೇಯಸಿರಿದ್ದಾರೆ. ಅದಕ್ಕಾಗಿ ಹೊಟ್ಟೆ ತುಂಬಿಸಬೇಕಾಗಿರುವ ಕಾರಣ ತಾನು ಇಷ್ಟೆಲ್ಲ ಅಪರಾಧ ಎಸಗಿದ್ದೇನೆ ಎಂದು 6ನೇ ತರಗತಿಯನ್ನಷ್ಟೇ ಕಲಿತಿರುವ ತೊರೆದ ಮೌರ್ಯ ಪೊಲೀಸರಿಗೆ ತಿಳಿಸಿದ್ದಾನೆ. ಈತ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳನ್ನು ಮಾಡುವ ಮೂಲಕ ಜನಪ್ರಿಯತೆಯನ್ನೂ ಪಡೆದಿದ್ದ.
ಈತ ಹಣವನ್ನು ದ್ವಿಗುಣಗೊಳಿಸುವ ಹೆಸರಿನಲ್ಲಿ 3 ಲಕ್ಷ ರೂ. ವಂಚಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮುಂಬೈನಲ್ಲಿ ಇರುವಾಗಲೇ ಈತ 2000ದಲ್ಲಿ ಸಂಗೀತಾ ಎಂಬುವರನ್ನು ಮದುವೆಯಾಗಿದ್ದ. ಆಕೆಗೆ ಈಗ 40 ವರ್ಷ ವಯಸ್ಸು. ಈಕೆಯಿಂದ ಅಜಿತ್ ಮೌರ್ಯ 7 ಮಕ್ಕಳನ್ನು ಪಡೆದಿದ್ದ. 2010ರಲ್ಲಿ ಕೆಲಸ ಕಳೆದುಕೊಂಡು ಉತ್ತರ ಪ್ರದೇಶದ ಗೊಂಡಾಗೆ ಬಂದ ಈತ ಆಗಿನಿಂದಲೇ ತನ್ನ ಆರ್ಥಿಕ ಅಪರಾಧಗಳನ್ನು ಶುರು ಮಾಡಿದ್ದ.
2016ರಲ್ಲಿ ಈತನ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು. ಅಂದಿನಿಂದ ಇಂದಿನವರೆಗೆ 9ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಇದೇ ಸಮಯದಲ್ಲಿ ಸುಶೀಲ ಎಂಬಾಕೆಯ ಸಂಪರ್ಕಕ್ಕೆ ಬಂದ ಅಜೀತ್ ಮೌರ್ಯ, ಆಕೆಯೊಂದಿಗೆ ಸೇರಿ ನಕಲಿ ನೋಟುಗಳ ಹಂಚಿಕೆ ಹಾಗೂ ನಕಲಿ ಹಣ ಹೂಡಿಕೆ ಯೋಜನೆಗಳನ್ನು ಆರಂಭಿಸಿದ್ದ. 2019ರಲ್ಲಿ ಅಜೀತ್ ಮೌರ್ಯ ಹಾಗೂ ಸುಶೀಲಾಳನ್ನು ಪೊಲೀಸರು ಬಂಧಿಸಿದ್ದರು. ಅಷ್ಟಲ್ಲಾಗಲೇ ಅಜೀತ್ ಮೌರ್ಯ, ಸುಶೀಲಾಳನ್ನು ಮದುವೆಯಾಗಿ 2 ಮಕ್ಕಳು ಪಡೆದಿದ್ದ.
ಅಕ್ರಮವಾಗಿ ಗಳಿಸಿದ್ದ ಹಣದಲ್ಲಿ ಅಜೀತ್ ಮೌರ್ಯ 2 ಮನೆಗಳನ್ನೂ ನಿರ್ಮಿಸಿದ್ದ. ಒಂದು ಮನೆಯಲ್ಲಿ ಮೊದಲ ಪತ್ನಿ ಸಂಗೀತಾ ಇದ್ದರೆ, ಮತ್ತೊಂದು ಮನೆಯಲ್ಲಿ ಎರಡನೇ ಪತ್ನಿ ಸುಶೀಲಾ ತಮ್ಮ ಮಕ್ಕಳೊಂದಿಗೆ ಇದ್ದಳು. ಅಚ್ಚರಿಯೆಂದರೆ ಆರೋಪಿ ಅಜೀತ್ ಮೌರ್ಯ ಇಬ್ಬರೂ ಪತ್ನಿಯರೊಂದೊಗೂ ವಾಸಿಸುತ್ತಿರಲಿಲ್ಲ. ಆತ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಪತ್ನಿಯರಿಗೆ ವಿಲಾಸಿ ಭೋಗ ಜೀವನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದ ಆರೋಪಿ, ತಾನು ಬಾಡಿಗೆಗಿದ್ದ ಮನೆಗೆ ತನ್ನ ಗರ್ಲ್ ಫ್ರೆಂಡ್ಸ್‌ಗಳನ್ನು ಕರೆಸಿಕೊಳ್ತಿದ್ದ.
ಇವೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿದ್ದ ಅಜೀತ್ ಮೌರ್ಯ, ತನ್ನ ರೀಲ್ಸ್ ಗಳ ಮೂಲಕ ಇದ್ದಕ್ಕಿದ್ದಂತೆಯೇ ಸೋಷಿಯಲ್ ಮೀಡಿಯಾ ಸ್ಟಾರ್ ಕೂಡಾ ಆಗಿದ್ದ. ಸೋಷಿಯಲ್ ಮೀಡಿಯಾ ಮೂಲಕವೂ ಯುವತಿಯರ ಪರಿಚಯ ಮಾಡಿಕೊಂಡು ಅವರೊಂದಿಗೆ ಸಂಬಂಧ ಬೆಳೆಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.