ಕೆಟ್ಟ ಮೇಲೆ ಬುದ್ದಿ ಬಂತು- ಪ್ರಾದೇಶಿಕ ಪಕ್ಷದ ಜೊತೆಗೆ ಮೈತ್ರಿ ನಡೆಯದ್ದಕ್ಕೆ ರಾಹುಲ್ ಗಾಂಧಿ ತರಾಟೆ
ಹೊಸದಿಲ್ಲಿ: ಪ್ರಾದೇಶಿಕ ಪಕ್ಷಗಳ ಜತೆಗೆ ಪ್ರದೇಶ ಕಾಂಗ್ರೆಸ್ ಸಮಿತಿಗಳು ಮೈತ್ರಿ ಮಾಡಿಕೊಳ್ಳಲು ಏಕೆ ಹಿಂದೇಟು ಹಾಕುತ್ತಿವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರಾಹುಲ್ ಗಾಂಧಿ ಕಟುವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ನವದೆಹಲಿಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯ ಕಾರಿ ಸಭೆಯಲ್ಲಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದರು.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಕ್ತಿ ವೃದ್ಧಿಸಲು ಚಿಂತನೆ ನಡೆಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ 76 ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ವಿಧಾನಸಭೆ ಚುನಾವಣೆಯ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಹೊಂದಾಣಿಕೆ ಸಮಸ್ಯೆಯನ್ನು ರಾಹುಲ್ ಮುನ್ನೆಲೆಗೆ ತಂದು ಚರ್ಚಿಸಿದ್ದಾರೆ. ನಾವು ಐಎನ್ ಡಿ ಎ ಒಕ್ಕೂಟದೊಂದಿಗೆ ಸೀಟು ಹಂಚಿಕೆಯ ಒಪ್ಪಂದ ಮಾಡಿಕೊಂಡಿದ್ದೇವೆ. ಅದು ಹೇರಿಕೆ ಅಲ್ಲ, ಬಿಜೆಪಿ ವಿರುದ್ದದ ಹೋರಾಟಕ್ಕೆ ಅಗತ್ಯ ವಾಗಿದೆ. ಹೀಗಿರುವಾಗ ರಾಜ್ಯ ಘಟಕಗಳು ಏಕೆ ಸ್ಥಳೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ? ಮಾಡಿಕೊಳ್ಳದಿರಲು ಸಮಸ್ಯೆ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಪ್ರತೀ ಮತವೂ ಮುಖ್ಯ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವಿನ ಸೀಟು ಹಂಚಿಕೆ ವಿವಾದವೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು.