ಶ್ರೀರಾಮನ ದರ್ಶನಕ್ಕಾಗಿ ನಡೆದುಕೊಂಡೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿರುವ ಮುಸ್ಲಿಂ ಯುವತಿ
Tuesday, December 26, 2023
ನವದೆಹಲಿ: ಸದ್ಯ ಎಲ್ಲರ ಚಿತ್ತ ಅಯೋಧ್ಯೆ ರಾಮ ಮಂದಿರದ ಮೇಲೆ ನೆಟ್ಟಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ಈಗಾಗಲೇ ಸಜ್ಜಾಗುತ್ತಿದೆ. ಇತ್ತ ರಾಮನ ಭಕ್ತಿಯಲ್ಲಿ ಮುಳುಗಿದ ಯುವತಿಯೊಬ್ಬಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ರಾಮನ ಭಕ್ತಿಯಲ್ಲಿರುವ ಶಬ್ನಂ ಎಂಬ ಯುವತಿ ಭುಜದ ಮೇಲೆ ಕೇಸರಿ ಧ್ವಜ ಧರಿಸಿ, ಬೆನ್ನಿನಲ್ಲಿ ರಾಮ ಮಂದಿರದ ಫೋಟೋ ಮತ್ತು ತಲೆ ಮೇಲೆ ಹಿಜಾಬ್ ಧರಿಸಿ. ಮುಂಬೈನಿಂದ ತನ್ನಿಬ್ಬರು ಸ್ನೇಹಿತರೊಂದಿಗೆ ಸುಮಾರು 1,500 ಕಿ.ಮೀ. ದೂರ ಕ್ರಮಿಸಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇಲ್ಲಿಯವರೆಗೆ ಶಬನಂ ಇನ್ನೂರೈವತ್ತು ಕಿ.ಮೀ. ನಡೆದುಕೊಂಡಾಎ ನಾಸಿಕ್ ತಲುಪಿದ್ದಾರೆ. ಅವಕಾಶ ಸಿಕ್ಕಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವುದಾಗಿ ಶಬನಂ ಹೇಳಿದ್ದಾರೆ.
ಶಬನಂಗೆ ಶ್ರೀರಾಮನನ್ನು ನೋಡುವಾಸೆಯಂತೆ. ಆಕೆಗೆ ಬಾಲ್ಯದಿಂದಲೂ ರಾಮಾಯಣದ ಅಭಿರುಚಿ. ರಾಮಾಯಣ ಮತ್ತು ಮಹಾಭಾರತಗಳು ಅವರ ಜೀವನದ ಮೇಲೆ ಬಹಳ ಪ್ರಭಾವ ಬೀರಿದ್ದವಂತೆ. ಶ್ರೀರಾಮನನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರಂತೆ. ಆಕೆಯ ಕುಟುಂಬಸ್ಥರೂ ಆಕೆಯನ್ನು ಅಯೋಧ್ಯೆಗೆ ಹೋಗುವಂತೆ ಪ್ರೋತ್ಸಾಹಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ಬಳಿಕ ಅಯೋಧ್ಯೆಯ ಧನಿಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಗೆ ತೆರಳಲಿದ್ದಾರೆ. ಈ ಮೂಲಕ ತನಗೆ ಎರಡೂ ಧರ್ಮಗಳಲ್ಲಿ ಆಸಕ್ತಿ ಇದೆ ಎಂಬ ಸಂದೇಶವನ್ನು ಸಾರಲು ಹೊರಟಿದ್ದಾಳೆ. ಆಕೆಯ ಭದ್ರತೆಗಾಗಿ ಮಹಾರಾಷ್ಟ್ರ ಸರ್ಕಾರ ಮೂವರು ಮಹಿಳಾ ಪೊಲೀಸರನ್ನು ನಿಯೋಜಿಸಿದೆ.
ತನಗೆ ರಾಮಾಯಣ ಮತ್ತು ಭಗವಾನ್ ಶ್ರೀರಾಮನಲ್ಲಿ ತುಂಬಾ ಆಸಕ್ತಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಅಯೋಧ್ಯೆಗೆ ಹೋಗಿ ಶ್ರೀರಾಮಚಂದ್ರನ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ತನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಶಬನಮ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕೆಲಸದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶಬನಮ್ ಹೇಳಿದ್ದಾರೆ.