ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ : ಚಿತ್ರೀಕರಣ ವೇಳೆ ಕುಸಿದು ಬಿದ್ದ ನಟ
Friday, December 15, 2023
ಮುಂಬೈ: ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಯವರಿಗೆ ಗುರುವಾರ ಸಂಜೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಮುಂಬೈಯ ಅಂಧೇರಿ ಪ್ರದೇಶದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲಾಸ್ಟ್ ಗೆ ಒಳಗಾಗಿರುವ ಅವರ ಆರೋಗ್ಯ ಇದೀಗ ಸ್ಥಿರವಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ ಎಂದು ಆಸ್ಪತ್ರೆ ದೃಢಪಡಿಸಿದ್ದು, ಇದೀಗ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಆರೋಗ್ಯ ಚೆನ್ನಾಗಿದೆ ಎಂದಿದ್ದಾರೆ. ಮುಂಬಯಿಯಲ್ಲಿ ಗುರುವಾರ ಸಂಜೆ 'ವೆಲ್‌ಕಮ್ ಟು ಜಂಗಲ್' ಚಿತ್ರೀಕರಣದ ವೇಳೆ ಶ್ರೇಯಸ್ ತಲ್ಪಾಡೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
47 ವರ್ಷದ ಶ್ರೇಯಸ್ ತಲ್ಪಾಡೆ ತಮ್ಮ ಅಭಿನಯ ಪ್ರತಿಭೆಯಿಂದ ಗಮನ ಸೆಳೆದವರು. ಶಾರುಖ್ ಖಾನ್, ಅಕ್ಷಯ್ ಕುಮಾರ್ ಮೊದಲಾದ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡು ಮಿಂಚಿದ್ದಾರೆ. ಚಿತ್ರರಂಗಕ್ಕೆ 2002ರಲ್ಲೇ ಕಾಲಿಟ್ಟರು. 'ಆಂಖೇ' ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ರಿಲೀಸ್ ಆದ 'ಓಂ ಶಾಂತಿ ಓಂ' ಸಿನಿಮಾದಲ್ಲಿ ಶಾರುಖ್‌ನ ಗೆಳೆಯನಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. 'ಗೋಲ್‌ಮಾಲ್ ರಿಟರ್ನ್ಸ್', ಗೋಲ್‌ಮಾಲ್ 3', 'ಹೌಸ್‌ಫುಲ್ 2' ಅಂಥ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ.