Subrahmaya:- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದ್ದೂರಿಯ ಚಂಪಾಷಷ್ಠಿ ಆಚರಣೆ.ದೇವರ ದರುಶನ ಪಡೆದ ಲಕ್ಷಾಂತರ ಭಕ್ತರು.
Monday, December 18, 2023
ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಚಂಪಾ ಷಷ್ಠಿಯ ಉತ್ಸವವು ನಿನ್ನೆ ಪಂಚಮಿ ರಥೋತ್ಸವ ಮತ್ತು ಇಂದು ಮುಂಜಾನೆ ಮಹಾ ರಥೋತ್ಸವದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಈ ಹಿಂದೆ ಸುಳ್ಯ ತಾಲೂಕಿಗೆ ಹಾಗೂ ಪ್ರಸ್ತುತ ನೂತನ ಕಡಬ ತಾಲೂಕಿಗೆ ಒಳಪಡುವ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಹಿನ್ನೆಲೆಯಲ್ಲಿ ಶ್ರೀ ದೇವರು ನಿನ್ನೆ ಪಂಚಮಿ ತೇರಿನಲ್ಲಿ ಮತ್ತು ಇಂದು ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರುಶನ ಭಾಗ್ಯ ನೀಡಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥ ಸಾಗುತ್ತಿರಬೇಕಾದರೆ ಲಕ್ಷಾಂತರ ಮಂದಿ ಕಟ್ಟಡಗಳ ಮೇಲೇರಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶ್ರೀ ಸುಬ್ರಹ್ಮಣ್ಯನ ದರ್ಶನ ಮಾಡುತ್ತಾರೆ.
ರಥ ಸಾಗುತ್ತಿರುವಾಗ ತೇರಿಗೆ ಎಳ್ಳು,ಕರಿಮೆಣಸು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಳ್ಳುತ್ತಾರೆ.ಈ ಸಮಯದಲ್ಲಿ ಅರ್ಚಕರು ದೇವರಿಗೆ ಧರಿಸಿದ್ದ ಫಲ ಪುಷ್ಪಗಳನ್ನು ಭಕ್ತರತ್ತ ವೃಷ್ಟಿ ಮಾಡುತ್ತಾರೆ.ಇದನ್ನು ಮಹಾಭಾಗ್ಯವಾಗಿ ಮತ್ತು ಪ್ರಸಾದವಾಗಿ ಮನೆಗೆ ಭಕ್ತರು ಕೊಂಡೊಯ್ಯುತ್ತಾರೆ.
ಚಂಪಾಷಷ್ಠಿಯ ಕೊನೆಯ ದಿನದಂದು ಕೊಪ್ಪರಿಗೆಯನ್ನು ಇಳಿಸುವ ಮೂಲಕ ವಾರ್ಷಿಕ ಜಾತ್ರೆಯು ತೆರೆ ಕಾಣುತ್ತದೆ.
ಈ ವರ್ಷದ ಜಾತ್ರಾ ಮಹೋತ್ಸವು ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು. ದೇವಸ್ಥಾನದ ಆಡಳಿತ ಮಂಡಳಿ,ದೇವಸ್ಥಾನದ ಸಿಬ್ಬಂದಿಗಳು,ಪೋಲಿಸ್, ಕಂದಾಯ,ಮೆಸ್ಕಾಂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು,ಗೃಹರಕ್ಷಕ ದಳದ ಸಿಬ್ಬಂದಿಗಳು ಜಾತ್ರೋತ್ಸವ ಅಚ್ಚುಕಟ್ಟಾಗಿ ನಡೆಯಲು ವ್ಯವಸ್ಥೆಗಳನ್ನು ಕಲ್ಪಿಸಿದ್ದರು.