ಮಂಗಳೂರು: ನಾಲ್ಕುವರೆ ಶಿಶುವನ್ನು ಹತ್ಯೆ ಮಾಡಿ ಬಾಣಂತಿ ಆತ್ಮಹತ್ಯೆ ಶರಣು
Saturday, December 2, 2023
ಮಂಗಳೂರು: ಬಾಣಂತಿಯೊಬ್ಬರು ತಮ್ಮ ನಾಲ್ಕುವರೆ ತಿಂಗಳ ಗಂಡು ಶಿಶುವನ್ನು ಹತ್ಯೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಮಂಗಳೂರಿನ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ಫ್ಲ್ಯಾಟ್ ನಲ್ಲಿ ನಡೆದಿದೆ.
ಫಾತಿಮಾ ರುಕಿಯಾ (23) ಹಾಗೂ ನಾಲ್ಕುವರೆ ತಿಂಗಳ ಶಿಶು ಅಬ್ದುಲ್ಲಾ ಹೂದ್ ಮೃತಪಟ್ಟವರು.
ಫಾತಿಮಾ ರುಕಿಯಾರಿಗೆ ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಅಬ್ದುಲ್ಲಾ ಹೂದ್ ಎಂಬ ನಾಲ್ಕುವರೆ ತಿಂಗಳ ಗಂಡುಶಿಶು ಇದೆ. ಫಾತಿಮಾ ರುಕಿಯಾ ಹೆರಿಗೆಯ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದರು. ಆಕೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದ್ದರಿಂದ ಫಾತಿಮಾ ರುಕಿಯಾರಿಗೆ ಮಾನಸಿಕ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫಾತಿಮಾ ರುಕಿಯಾ ಈ ಕೃತ್ಯ ಎಸಗಿದ್ದಾರೆ. ಅವರು ಫ್ಲ್ಯಾಟ್ ನ ಬೆಡ್ ರೂಮ್ ಗ್ಯಾಲರಿಯಲ್ಲಿ ತಮ್ಮ ನಾಲ್ಕುವರೆ ತಿಂಗಳ ಶಿಶುವನ್ನು ಪ್ಲಾಸ್ಟಿಕ್ ಟಬ್ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಬಳಿಕ ತಾನು ಕೂಡಾ ಕೊಠಡಿಯ ಕಿಟಕಿಗೆ ಸೀರೆ ಬಿಗಿದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.