ಮಂಗಳೂರು: ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾಮರ್ ಕಳವು- ಹತ್ತು ಮಂದಿ ಪೊಲೀಸ್ ವಶಕ್ಕೆ
Sunday, December 10, 2023
ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳದ ಕಡೇಶ್ವಾಲ್ಯ, ಅಮೈ ಎಂಬಲ್ಲಿ ಎಂ.ಆರ್.ಪಿ.ಎಲ್ ನಿಂದ ಲೋಡ್ ಮಾಡಿಕೊಂಡು ಬಂದ ಡಾಮರನ್ನು ಟ್ಯಾಂಕರ್‌ಗಳಿಂದ, ಅಕ್ರಮವಾಗಿ ಬೇರೆ ಟ್ಯಾಂಕರ್‌ಗಳಿಗೆ ವರ್ಗಾಯಿಸುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಮಹಮ್ಮದ್ ಇಮ್ರಾನ್, ಅಶ್ರಫ್ ಎಂ., ವೀರೇಂದ್ರ ಎಸ್.ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್, ಮಹಮ್ಮದ್ ನಿಸಾರ್, ಮಹಮ್ಮದ್ ಸಿಹಾಬುದ್ದೀನ್ ಬಂಧಿತ ಆರೋಪಿಗಳು.
ಸೆನ್ ಹಾಗೂ ಅಪರಾಧ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ಟಿ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದು ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದಿದೆ. ವಿಚಾರಣೆ ವೇಳೆ ಉಡುಪಿಯ ವಿಜಯಕುಮಾರ್ ಶೆಟ್ಟಿ ಈ ಅಕ್ರಮ ಜಾಲದ ರೂವಾರಿ ಎನ್ನುವುದು ತಿಳಿದುಬಂದಿತ್ತು. ಆತನ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ ಎಂಬವರೊಂದಿಗೆ ಸೇರಿ ಈ ಕೃತ್ಯವನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿರುತ್ತದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ AP03X6149, KL43C3968, KA19AC4077, KA19AA7342, KA19AD6595 KA19AC8686, ಟ್ಯಾಂಕರ್ ಲಾರಿಗಳನ್ನು, ಡಾಮರ್ ಕಳವಿಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿದ್ದಾರೆ. ತೂಕ ಮಾಪನ -1, ಡಾಮರ್ ಬಿಸಿ ಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್ -1, ಡಾಮಾರ್ ತುಂಬಿಸಲು ಬಳಸಿರುವ ಕಬ್ಬಿಣದ ಟ್ಯಾಂಕ್ -1, 9 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಲಾಗಿದೆ.
ಇವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.